ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಹೊರವಲಯದ ಶಾಂತಿನಗರ ಎಂಬಲ್ಲಿ ನಢಯುತ್ತಿರುವ ಕ್ರೀಡಾಂಗಣ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಈ ಕುರಿತಂತೆ ಕಾಂಗ್ರೆಸ್ ಮುಖಂಡರು ಇಂದು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಕಾಮಗಾರಿಯ ಅವ್ಯವಸ್ಥೆ ಬಗ್ಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮೇ 20 ರಂದು ನಡೆದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರುಗಳು ಮೊದಲಿಗೆ ಅಪಾಯದ ಸ್ಥಿತಿಯಲ್ಲಿರುವ ಮಣ್ಣಿನ ರಾಶಿ ಮತ್ತು, ಕ್ರೀಡಾಂಗಣದಿಂದ ಹರಿಯುವ ನೀರು ಕೆಳಭಾಗದ ತೋಟಗಳಿಗೆ ನುಗ್ಗುವ ಪ್ರದೇಶವನ್ನು ವೀಕ್ಷಣೆ ನಡೆಸಿದರು.
ನಂತರ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಕಳೆದ 28 ವರ್ಷಗಳಿಂದ ಈ ಕ್ರೀಡಾಂಗಣದ ಕಾಮಗಾರಿಯನ್ನು ಸುಳ್ಯದ ಶಾಸಕರು ಮಾಡಿಸುತ್ತಿದ್ದು ಕೋಟಿಗಟ್ಟಲೆ ಹಣವನ್ನು ಇದಕ್ಕೆ ಸುರಿದು ಅಂದಿಗೂ ಇಂದಿಗೂ ಯಾವುದೇ ಬದಲಾವಣೆಗಳನ್ನು ಕಾಣದ ರೀತಿಯಲ್ಲಿ ಇದೆ. ಬರೀ ಮಣ್ಣನ್ನು ಲೆವೆಲ್ ಮಾಡಲು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿಂದ ಲಕ್ಷಗಟ್ಟಲೆ ಹಣದ ಕೆಂಪು ಕಲ್ಲನ್ನು ತೆಗೆದ ಗುಂಡಿಗೆ ಮಣ್ಣು ಮುಚ್ಚಲು ಮಾತ್ರ ಈ ಹಣದ ಉಪಯೋಗವನ್ನು ಮಾಡಿದ್ದಾರೆ. ಅದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನ ಇಲ್ಲಿ ಆಗಲಿಲ್ಲ ಎಂದು ಅವರು ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಗುಡ್ಡ ಕುಸಿಯಬಾರದೆಂದು ಜವಣಿಕೆ ಬಳ್ಳಿಯನ್ನು ನೆಟ್ಟರೆ ಅದು ಎಷ್ಟು ವೈಜ್ಞಾನಿಕವಾಗಿ ಸರಿ ಎಂದು ಅವರು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ ಈ ರೀತಿಯ ಅವೈಜ್ಞಾನಿಕವಾದ ಕಾಮಗಾರಿಯನ್ನು ನಾನು ಎಲ್ಲಿಯೂ ನೋಡಲಿಲ್ಲ. ಜನರ ಹಣವನ್ನು ಪೋಲು ಮಾಡುವುದು ಎಂದರೆ ಇದನ್ನೇ ಹೇಳಬಹುದು. ಏಕೆಂದರೆ ಕ್ರೀಡಾಂಗಣಕ್ಕೆ ಸೂಕ್ತವಾದ ಪ್ರದೇಶ ಇದಲ್ಲವೇ ಅಲ್ಲ. ಇದು ಕೇವಲ ಬಿಜೆಪಿಯ ಒಬ್ಬ ಜೆಸಿಬಿ ಮಾಲಕನಿಗೆ ಕೆಲಸದ ಗುತ್ತಿಗೆ ಕೊಡಲು ಅಂದು ಬಿಜೆಪಿಯವರು ಮಾಡಿದ ಕೆಲಸ ಇದು. ಇದಕ್ಕೆ ಬಳಸಿದ ಹಣದ ಲೆಕ್ಕಾಚಾರವನ್ನು ಸಾರ್ವಜನಿಕರಿಗೆ ಕೊಡಲೇಬೇಕು. ಇಲ್ಲದಿದ್ದರೆ ನಾವು ಇದನ್ನು ಪ್ರಶ್ನಿಸುತ್ತೇವೆ ಎಂದು ಹೇಳಿದರು. ಇದೀಗ ಮಣ್ಣಿನ ಕುಸಿತವನ್ನು ತಡೆಯಲು ಮಣ್ಣು ತುಂಬಿದ ಚೀಲವನ್ನು ಇಡುತ್ತಿದ್ದಾರೆ ಎಂದರೆ ಅವರ ಅವಿವೇಕತನ ಕ್ಕೆ ಇದುವೇ ಸಾಕ್ಷಿ ಎಂದು ಲೇವಡಿ ಮಾಡಿದರು. ಗುಡ್ಡ ಅಗೆದು ಇಲಿ ಹಿಡಿಯುವ ಪ್ರಯತ್ನಕ್ಕೆ ಸುಳ್ಯದ
ಶಾಸಕರು ಮುಂದಾಗಿದ್ದಾರೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ಮಾತನಾಡಿ “ಇದು ಗುಡ್ಡ ಅಗೆದು ಇಲಿ ಹಿಡಿಯುವುದಲ್ಲ ಗುಡ್ಡ ಅಗೆದು ದುಡ್ಡು ಮಾಡುವುದು” ಎಂದು ಆರೋಪಿಸಿದರು. ಇಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಸ್ಥಳೀಯ ಜನತೆಗೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸ್ಥಳೀಯರ ಸುರಕ್ಷೆಯ ಬಗ್ಗೆ ಗಮನಹರಿಸಿ ಕಾಮಗಾರಿಯನ್ನು ನಡೆಸದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರ ಪಂಚಾಯತ್ ಸದಸ್ಯ ವೆಂಕಪ್ಪಗೌಡ ಮಾತನಾಡಿ ಮುಂದಿನ ಪಂಚಾಯತ್ ಸಭೆಯಲ್ಲಿ ಈ ವಿಷಯದ ಬಗ್ಗೆ ಬಹಳ ಮುಖ್ಯವಾಗಿ ಚರ್ಚೆಯನ್ನು ನಡೆಸಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಕೃಷ್ಣಪ್ಪ, ಪಿಎಸ್ ಗಂಗಾಧರ್, ಸುರೇಶ್ ಅಮೈ, ನಂದರಾಜ್ ಸಂಕೇಶ್, ಕೆಎಂ ಮುಸ್ತಫ, ಹಮೀದ್ ಕುತ್ತಮಟ್ಟೆ, ಸಿದ್ದಿಕ್ ಕೊಕ್ಕೋ, ಹನೀಫ್ ಕೊಚ್ಚಿ ನಗರ ಪಂಚಾಯತ್ ಸದಸ್ಯರುಗಳಾದ ಧೀರ ಕ್ರಾಸ್ತ,ಶರೀಫ್ ಕಂಠಿ, ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿರಿ…