ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಹಾಗೂ ಕಾರ್ಯ ನಿರ್ವಹಣಾಧಿಕಾರಿ ನಡುವಿನ ಜಟಾಪಟಿ ತಾರಕಕ್ಕೇರಿದೆ. ಉಭಯ ಬಣಗಳು ಪರಸ್ಪರ ದೂರು ಪ್ರತಿ ದೂರಿನಲ್ಲಿ ತೊಡಗಿವೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರಸಿದ್ಧ ಕ್ಷೇತ್ರ ಮಾತ್ರವಲ್ಲದೆ, ರಾಜ್ಯದಲ್ಲಿ ಅತಿಹೆಚ್ಚು ಆದಾಯ ಬರುವ ಸ್ಥಳವೂ ಹೌದು. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಈ ದೇವಸ್ಥಾನದಲ್ಲಿ ಆಡಳಿತ ಮಂಡಳಿ – ಕಾರ್ಯ ನಿರ್ವಹಣಾಧಿಕಾರಿ ನಡುವಿನ ಜಟಾಪಟಿ ಬೀದಿಗೆ ಬಂದಿದೆ.
ಆಡಳಿತ ಮಂಡಳಿ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ವಿರುದ್ಧ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸಾಲು-ಸಾಲು ಆರೋಪ ಮಾಡಿದ್ದಾರೆ. ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಶೀಘ್ರವಾಗಿ ಕೆಲಸ ಮಾಡಲು ಎಡವುತ್ತಿದ್ದಾರೆ ಎಂದು ದೂರಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅವರು ವಾರದಲ್ಲಿ 4 ದಿನ ಮಾತ್ರ ಇರುತ್ತಾರೆ. ದಾಖಲೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಕೊಡ್ತಿಲ್ಲ. ಹೀಗಾಗಿ ಅವರನ್ನು ಕೆಳಗಿಳಿಸಿ ಒಳ್ಳೆಯ ಅಧಿಕಾರಿಯನ್ನು ನೇಮಿಸಿ ಎಂದು ಸಚಿವ ಎಸ್.ಅಂಗಾರ ಹಾಗೂ ಸಚಿವೆ ಶಶಿಕಲಾ ಜೊಲ್ಲೆಗೆ ಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಎರಡು-ಮೂರು ತಿಂಗಳಿನಿಂದ ಈ ರೀತಿಯ ವಿರೋಧ ಪ್ರಕಿಯೆ ನಡೆಯುತ್ತಿದೆ. ನಾನು ಕಚೇರಿ ಕೆಲಸ ಹೊರತುಪಡಿಸಿ ಬೇರೆ ಸಂಧರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಬಿಟ್ಟು ಹೊರಗೆ ಹೋಗೋದಿಲ್ಲ. ಕಚೇರಿ ಕೆಲಸವನ್ನು ದೇವರ ಕೆಲಸವೆಂದು ಭಾವಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.
ಆಡಳಿತ ಮಂಡಳಿ ಮತ್ತು ಕಾರ್ಯ ನಿರ್ವಾಹಣಾಧಿಕಾರಿಯ ನಡುವಿನ ಜಟಾಪಟಿಯಿಂದ ಭಕ್ತ ಸಮೂಹ ಬಡವಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ವಸತಿಗೃಹ ನಿರ್ಮಿಸುವ ಕಾಮಗರಿಗಳಿಗೆ ಹಿನ್ನಡೆಯಾಗಿದೆ. ಇದರಿಂದ ರಾತ್ರಿ ತಂಗಲು ವ್ಯವಸ್ಥೆಯಿಲ್ಲದೆ ಭಕ್ತರು ಕಷ್ಟಪಡುವಂತಾಗಿದೆ.