ಸಮಗ್ರ ನ್ಯೂಸ್: ಅನ್ಯ ಜಾತಿಯ ಯುವತಿಯನ್ನು ಮದುವೆ ಆಗಿದ್ದಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ನ ಬೇಗುಂ ಬಜಾರ್ನಲ್ಲಿ ನಡೆದಿದೆ. ಐದು ಮಂದಿಯ ಗ್ಯಾಂಗ್ ಯುವನನ್ನು ನಡುರಸ್ತೆಯಲ್ಲೇ ಕುಟುಂಬದ ಎದುರಲ್ಲೇ ಮಾರಕಾಸ್ತ್ರಗಳಿಂದ ಇರಿದು ಕೊಂದಿದ್ದಾರೆ.
ಈ ಘಟನೆ ಶುಕ್ರವಾರ ರಾತ್ರಿ 7.30ರ ಸುಮಾರಿಗೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಶಾಹಿನಾಯತ್ಗುಂಜ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈವರೆಗೂ ಕೊಲೆಗಾರರ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ದೊರೆತಿಲ್ಲ. ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಮೃತ ಯುವಕನನ್ನು ನೀರಜ್ ಪನ್ವಾರ್ (21) ಎಂದು ಗುರುತಿಸಲಾಗಿದೆ. ಈತ ಬೇರೊಂದು ಜಾತಿಯ ಯುವತಿಯನ್ನು ಮದುವೆ ಆಗಿದ್ದ. ಇಬ್ಬರ ಮದುವೆ ಯುವತಿ ಮನೆಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಮದುವೆಯಾಗಿದ್ದರು. ದಂಪತಿಗೆ ಎರಡೂವರೆ ತಿಂಗಳ ಹಸಿಗೂಸಿದೆ. ನೀರಜ್ ಪನ್ವಾರ್ ಬೇಗುಂ ಬಜಾರ್ನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದನು.
ಯುವತಿಯ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ನೀರಜ್ಗೆ ತಲೆ, ಎದೆ ಹಾಗೂ ಇನ್ನಿತರ ಭಾಗಗಳಿಗೆ ಇರಿದು ಕೊಂದಿದ್ದಾರೆ. ನೀರಜ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ನೀರಜ್ ಸಾವಿನ ಬಗ್ಗೆ ಆತನ ತಂದೆ ಮಾತನಾಡಿದ್ದು, ಪ್ರೇಮ ವಿವಾಹವಾಗಿದ್ದಕ್ಕೆ ನನ್ನ ಮಗನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಹಿಂದಿನಿಂದ ಆತನಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಆರೋಪಿಸಿದ್ದಾರೆ.