ಸಮಗ್ರ ನ್ಯೂಸ್: ದೇಶದಲ್ಲಿ ಹಣದುಬ್ಬರದಿಂದ ಕಂಗಾಲಾಗಿರುವ ಶ್ರೀಸಾಮಾನ್ಯನಿಗೆ ಮತ್ತೊಂದು ಶಾಕ್ ಎದುರಾಗಿದೆ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳವಾಗಿದೆ.
ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಈ ತಿಂಗಳು ಎರಡನೇ ಬಾರಿಗೆ ಹೆಚ್ಚಿಸಲಾಗಿದೆ. ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು 3.50 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ವಾಣಿಜ್ಯ ಸಿಲಿಂಡರ್ ಬೆಲೆಯನ್ನು 8 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳದ ನಂತರ, ದೇಶೀಯ ಸಿಲಿಂಡರ್ ಈಗ ದೇಶಾದ್ಯಂತ ಬಹುತೇಕ ಎಲ್ಲಾ ನಗರಗಳಲ್ಲಿ 1000 ರೂ.ಗಡಿ ದಾಟಿದೆ.
ದೆಹಲಿ ಮತ್ತು ಮುಂಬೈನಲ್ಲಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ 1003 ರೂ., ಕೋಲ್ಕತಾದಲ್ಲಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 1029 ರೂ., ಚೆನ್ನೈನಲ್ಲಿ ಇಂದಿನಿಂದ 1018.5 ರೂ. ಇದೆ.
ಇದಕ್ಕೂ ಮೊದಲು ಮೇ 7 ರಂದು, ಸಿಲಿಂಡರ್ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಗೃಹಬಳಕೆಯ ಸಿಲಿಂಡರ್ ಜೊತೆಗೆ, ಕಮರ್ಷಿಯಲ್ ಸಿಲಿಂಡರ್ ಸಹ ದುಬಾರಿಯಾಗಿತ್ತು.