ಸಮಗ್ರ ನ್ಯೂಸ್: ಹಿಜಾಬ್ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಮವಸ್ತ್ರ ಮಾರ್ಗಸೂಚಿ ಪ್ರಕಟಿಸಿದೆ.
ಈ ಬಾರಿ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಸಮಿತಿ ನಿಗದಿಪಡಿಸಿರುವ ಸಮವಸ್ತ್ರ ಧರಿಸಬೇಕು. ಒಂದು ವೇಳೆ ನಿಗದಿಪಡಿಸಿಲ್ಲವಾದರೆ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡುವ ಸಮವಸ್ತ್ರ ಧರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹಿಜಾಬ್ ವಿವಾದದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಸಮವಸ್ತ್ರಗಳನ್ನು ಧರಿಸುವಂತೆ ಸೂಚಿಸಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯು 2022-23ನೇ ಶೈಕ್ಷಣಿಕ ವರ್ಷದ ದಾಖಲಾತಿ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮೇ 20ರಿಂದಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ.
ಜೂ. 1ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಪ್ರವೇಶ ಪಡೆಯಲು ಜೂ. 15 ಕೊನೆಯ ದಿನವಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳು ಜೂ. 9ರಿಂದ ಆರಂಭವಾಗಲಿದೆ. ಅ. 1ರಿಂದ 12ರ ವರೆಗೆ ಮಧ್ಯಾಂತರ ರಜೆ ಇರಲಿದೆ. 2023 ಮಾ. 31 ಕೊನೆಯ ಕಾರ್ಯನಿರತ ದಿನವಾಗಿದೆ. ಎ. 1ರಿಂದ ಬೇಸಗೆ ರಜೆ ಆರಂಭವಾಗಲಿದೆ.
ದಂಡ ಶುಲ್ಕವಿಲ್ಲದೆ ದಾಖಲಾತಿ ಪಡೆಯಲು ಜೂ. 15 ಕೊನೆಯ ದಿನವಾಗಿದೆ. ವಿವಿಧ ಮಂಡಳಿಗಳಿಂದ ಪಾಸ್ ಆಗಿರುವ ಬಗ್ಗೆ ತಾತ್ಕಾಲಿಕ ಆರ್ಹತಾ ಪತ್ರದ ಆಧಾರದ ಮೇಲೆ ಪ್ರವೇಶ ನೀಡಬಾರದು.
ಹಾಗಾದರೆ ಪ್ರಾಂಶುಪಾಲರನ್ನೇ ನೇರ ಹೊಣೆಗಾರರಾಗಿ ಮಾಡಲಾಗುವುದು ಎಂದು ಎಚ್ಚರಿಕೆಯನ್ನೂ ಇಲಾಖೆ ನೀಡಿದೆ.