ಸಮಗ್ರ ನ್ಯೂಸ್: ಮಳೆಗಾಲ ಆರಂಭವಾಗುತ್ತಿದ್ದಂತೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರನ ಸನ್ನಿದಿಯ ಬಲಭಾಗದಿಂದ ಬೃಹತ್ ಗಾತ್ರದ ಬಂಡೆ ಕಲ್ಲೊಂದು ಉರುಳಿ ಕೆಳಗೆ ಬಿದ್ದಿದೆ.
ಘಟನೆಯಿಂದ ಕಾರಿಂಜ ರಸ್ತೆಗೆ ಮರ ಉರುಳಿ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ರಸ್ತೆಯಲ್ಲಿದ್ದ ಮರಗಳನ್ನು ತೆರವು ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಗುಡ್ಡದಲ್ಲಿರುವ ಕೆಲವು ಮರಗಳಿಗೆ ಹಾನಿಯಾಗಿದೆ. ಬೆಳಿಗ್ಗೆ ಸುಮಾರು 9 ಗಂಟೆಯ ಬಳಿಕ ಕಾರಿಂಜೇಶ್ವರನ ದೇವಾಲಯದ ಸಮೀಪದಲ್ಲೇ ಇದ್ದ ಆಯತಾಕಾರದ ಬೃಹತ್ ಬಂಡೆ ಕಲ್ಲು ಕೆಳಗೆ ಉರುಳಿ ಕೊಂಡು ಬಂದು ರಸ್ತೆಯ ಬದಿಯಲ್ಲಿ ಸಿಲುಕಿಕೊಂಡು ನಿಂತಿದೆ. ಕಲ್ಲು ಬಂಡೆ ಉರುಳಿಕೊಂಡು ಬರುವ ವೇಳೆ ಅನೇಕ ಮರಗಳು ನೆಲಕ್ಕುರಳಿದ್ದು, ಇನ್ನು ಕೆಲವು ಮರಗಳಿಗೆ ಹಾನಿಯಾಗಿದೆ. ಕಳೆದ ವರ್ಷ ಬೇಸಿಗೆ ಕಾಲದಲ್ಲಿ ಕಾರಿಂಜೇಶ್ವರನ ಸನ್ನಿಧಿಯ ಎಡಭಾಗದಲ್ಲಿ ಮಣ್ಣು ಕುಸಿದು ಬಿದ್ದು ಬಳಿಕ ತಡೆಗೋಡೆ ಕಟ್ಟಲಾಗಿತ್ತು.
ಕಾರಿಂಜೇಶ್ವರನ ಗುಡ್ಡದಲ್ಲಿ ನಡೆಯುವ ಆಕ್ರಮ ಕಲ್ಲಿನ ಕೋರೆಯ ಪರಿಣಾಮವಾಗಿ ಇಲ್ಲಿ ಕುಸಿತ ಕಂಡಿದೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಇಲ್ಲಿನ ಕಲ್ಲಿನ ಕೋರೆಗಳನ್ನು ಬಂದ್ ಮಾಡಲು ಹೋರಾಟಗಳು ನಡೆದಿತ್ತು. ಕಲ್ಲಿನ ಕೋರೆಯ ಸ್ಪೋಟದ ಪರಿಣಾಮದಿಂದ ಕಾರಿಂಜೇಶ್ವರನ ಸನ್ನಿಧಿಗೆ ತೊಂದರೆಯಾಗುತ್ತದೆ ಎಂಬುದು ಹಿಂದೂ ಸಂಘಟನೆ ಹೋರಾಟ ಕೈಗೊಂಡಿತ್ತು. ಆದರೆ ಮತ್ತೆ ಕಾರಿಂಜೇಶ್ವರನ ಸನ್ನಿಧಿಯಲ್ಲಿ ಕಲ್ಲು ಕೆಳಗೆ ಬೀಳುವ ಮೂಲಕ ಅಪಾಯದ ಸಂದೇಶ ನೀಡಿದೆ.
ಇಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲಿನ ಕೋರೆಯ ಸ್ಪೋಟದ ಪರಿಣಾಮವಾಗಿ ಗುಡ್ಡದಲ್ಲಿ ಬಿರುಕಿನ ಸಮಸ್ಯೆ ಉಂಟಾಗಿರಬಹುದು. ಸ್ಪೋಟದ ಪರಿಣಾಮವಾಗಿ ಕಳೆದ ಬಾರಿ ಕಾರಿಂಜೇಶ್ವರನ ಎಡಭಾಗದಲ್ಲಿ ಜರಿದುಬಿದ್ದು ಹಾನಿಯಾಗಿತ್ತು. ಆ ಬಳಿಕ ಈ ಬಾರಿ ಮೇಲಿನಿಂದ ಮತ್ತೊಂದು ಕಲ್ಲು ಬೀಳುವ ಮೂಲಕ ಕಲ್ಲಿನ ಸ್ಫೋಟದ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.