ಸಮಗ್ರ ನ್ಯೂಸ್: ಮಾಧ್ಯಮ ಅಥವಾ ಸಮೂಹ ಮಾಧ್ಯಮಗಳೆಂದು ಬಂದಾಗ ಸಾಮಾನ್ಯವಾಗಿ ಪತ್ರಿಕೆ, ಬಾನುಲಿ ಮತ್ತು ದೂರದರ್ಶನಗಳನ್ನು ಸೇರಿಸಿ ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಎನಿಸಿಕೊಂಡ ಇವುಗಳಿಗೆ ಸೆಡ್ಡು ಹೊಡೆದು ಮಾಹಿತಿಯನ್ನು, ಮನೋರಂಜನೆಯನ್ನು, ದೃಶ್ಯ, ಸುದ್ದಿ ಎಲ್ಲವನ್ನೂ ಕ್ಷಣಮಾತ್ರದಲ್ಲಿ ತಲುಪಿಸಬಲ್ಲ ಮತ್ತೊಂದು ನವಮಾದ್ಯಮ ಎಂದರೆ ಡಿಜಿಟಲ್ ಪತ್ರಿಕೋದ್ಯಮ.
ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ, ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಮಾಧ್ಯಮವು ಕಾರ್ಯನಿರ್ವಹಿಸುತ್ತದೆ. ಅಂತೆಯೇ ಮಾಧ್ಯಮವನ್ನು “ನಾಲ್ಕನೇ ಅಂಗ” ಎಂದೂ ಕರೆಯುತ್ತಾರೆ.
ಈ ನಾಲ್ಕನೇ ಅಂಗಕ್ಕೆ ಹೊಸದಾಗಿ ಸೇರ್ಪಡೆಯಾದ ಡಿಜಿಟಲ್ ಪತ್ರಿಕೋದ್ಯಮ ಇಂದು ಮಾದ್ಯಮರಂಗದಲ್ಲಿ ಹೊಸ ಛಾಪನ್ನು ಸೃಷ್ಟಿಸಿದೆ. ಹಲವಾರು ಡಿಜಿಟಲ್ ಸುದ್ದಿ ಮಾಧ್ಯಮಗಳ ನಡುವೆ ಸುದ್ದಿ ತಲುಪಿಸುವ ಧಾವಂತ ಹೆಚ್ಚಾಗಿದ್ದು ಪರಸ್ಪರ ಪೈಪೋಟಿಗಳಿವೆ. ಈ ಧಾವಂತದ ಜಗತ್ತಿನಲ್ಲಿ ಸುದ್ದಿನೀಡುವ ಆತುರದಲ್ಲಿ ಹಲವು ಸುದ್ದಿಗಳು ಸುದ್ದಿಮೌಲ್ಯ ಕಳೆದುಕೊಳ್ಳುತ್ತಿವೆ. ಕೆಲವು ಸುದ್ದಿಗಳು ಕಟ್ಟಕಡೆಯ ಓದುಗನಿಗೆ ಲಭ್ಯವಾದಾಗ ಮೂಲಸ್ವರೂಪವನ್ನೇ ಕಳೆದುಕೊಳ್ಳುತ್ತವೆ.
ಹಲವಾರು ಸುದ್ದಿಮಾಧ್ಯಮಗಳ ನಡುವೆ ಹೊಸತೊಂದನ್ನು ನಾಡಿಗೆ ನೀಡಬೇಕೆಂಬ ನಮ್ಮ ತುಡಿತದ ಫಲವಾಗಿ ಆರಂಭಗೊಳಿಸಿದ ನಿಮ್ಮ “ಸಮಗ್ರ ಸಮಾಚಾರ.ಕಾಂ” ಗೆ ಇಂದು ಒಂದು ವರುಷ ತುಂಬಿದ ಸಂಭ್ರಮ. ವೆಬ್ ಮಾದ್ಯಮವನ್ನು ಆರಂಭಗೊಳಿಸಿದಾಗ ನಮಗೇನೂ ಬಾರೀ ನಿರೀಕ್ಷೆಗಳೇನೂ ಇರಲಿಲ್ಲ. ಆದರೆ ನಿಮ್ಮ ಪ್ರೋತ್ಸಾಹ, ನೀವು ನೀಡಿದ ಬೆಂಬಲ ಈ ಸ್ವತಂತ್ರ ಪತ್ರಿಕೋದ್ಯಮವನ್ನು ಇನ್ನಷ್ಟು ಉತ್ತಮಗೊಳಿಸುವ ವ್ಯಾಕ್ಸಿನ್ ಆಯಿತು.
ಕಳೆದೊಂದು ವರ್ಷದಿಂದ ನಿಮ್ಮ ಬೆಂಬಲದೊಂದಿಗೆ ಮಾದ್ಯಮರಂಗದಲ್ಲಿ ನಮ್ಮದೇ ಸ್ವಂತ ಹೆಜ್ಜೆಯನ್ನು ಗಟ್ಟಿಯಾಗಿ ನೆಟ್ಟಿದ್ದೇವೆ. ಮುಂದೆ ನಡೆಯಲುಅಂಜಿಕೆಯಿಲ್ಲ. ಹಿಂದಡಿಯಿಡಲು ನೀವು ಬಿಡುವುದಿಲ್ಲ ಎಂಬ ನಂಬಿಕೆಯಿದೆ. ಹೀಗಿರುವಾಗ ಸುದ್ದಿಯನ್ನು ಇದ್ದಹಾಗೇ, ಯಾವುದೇ ಉತ್ಪ್ರೇಕ್ಷೆ ಇಲ್ಲದೆ, ಮುಕ್ತ, ನಿರ್ಭೀತ, ನಿಷ್ಪಕ್ಷಪಾತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗ್ಯಾವ ಅಂಜಿಕೆಯಿಲ್ಲ. ಕಳೆದೊಂದು ವರ್ಷದಿಂದ ನೀವು ನೀಡಿದ ಬೆಂಬಲ ಮುಂದೆಯೂ ನಮಗಿರಲಿ.


ನಿಮ್ಮೂರಿನ ಸಮಸ್ಯೆಗಳ ವರದಿಗಾಗಿ ಸಂಪರ್ಕಿಸಿ…9481761063, 9449920971