Ad Widget .

ಸುಳ್ಯ: ಶಾಂತಿನಗರ ನಿವಾಸಿಗಳ ಮನಃಶಾಂತಿ‌ ಕದಡಲು ತಯಾರಾಗಿದೆ ತಾಲೂಕು ಕ್ರೀಡಾಂಗಣ| ಅವೈಜ್ಞಾನಿಕವಾಗಿ ನಡೆಯುತ್ತಿದೆ ಕೋಟಿ ರೂ.ಗಳ ‌ಕಾಮಗಾರಿ|

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ನಗರದ ಹೊರವಲಯದ ಶಾಂತಿನಗರ ಎಂಬಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಯು ಸ್ಥಳೀಯ ನಿವಾಸಿಗಳ ಮನಃಶಾಂತಿ‌ ಕದಡುವ ಎಲ್ಲಾ ಲಕ್ಷಣಗಳು ಆರಂಭವಾಗಿವೆ.

Ad Widget . Ad Widget .

ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್. ಅಂಗಾರ ಅವರ ಮುತುವರ್ಜಿಯಲ್ಲಿ ಈ ಕ್ರೀಡಾಂಗಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.‌ ಈ ಹಿಂದೆ ಇದ್ದಂತಹ ಕ್ರೀಡಾಂಗಣವು ನೆಲ ಮಟ್ಟದಿಂದ ಎತ್ತರದಲ್ಲಿ ಇದ್ದ ಕಾರಣ, ಕ್ರೀಡಾಂಗಣವನ್ನು ಸಮತಟ್ಟು ಮಾಡುವ ಕಾಮಗಾರಿಗಾಗಿ ಹಾಗೂ ಇತರ ಅಭಿವೃದ್ಧಿ ಕೆಲಸಗಳಿಗಾಗಿ ಸುಮಾರು ಒಂದು ಕೋಟಿ ರೂಪಾಯಿಗಳನ್ನು ಮೀಸಲಿಟ್ಟು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಜಿಲ್ಲಾ ನಿರ್ಮಿತಿ ಕೇಂದ್ರ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಯು ಭರದಿಂದ ಸಾಗುತ್ತಿದೆ.

Ad Widget . Ad Widget .

ಈ ಹಿಂದೆ ಎತ್ತರವಾಗಿದ್ದ ಕ್ರೀಡಾಂಗಣವನ್ನು ಸಮತಟ್ಟು ಮಾಡುವ ಸಂದರ್ಭದಲ್ಲಿ ತೆಗೆದ ಮಣ್ಣನ್ನು ಕ್ರೀಡಾಂಗಣದ ಕೆಳ ಭಾಗದಲ್ಲಿರುವ ಪ್ರದೇಶದಲ್ಲಿ ಸುರಿಯಲಾಗಿದೆ. ಹೀಗೆ ಸುರಿದ ಮಣ್ಣು ಇದೀಗ ಮೈದಾನದ ಕೆಳ ಭಾಗದಲ್ಲಿರುವ ಆರು ಕುಟುಂಬಗಳಲ್ಲಿ ಪ್ರಾಣ ಭಯದ ವಾತಾವರಣವನ್ನು ನಿರ್ಮಾಣಗೊಳಿಸಿದೆ. ಅವೈಜ್ಞಾನಿಕವಾಗಿ ಲೋಡುಗಟ್ಟಲೆ ಮಣ್ಣನ್ನು ಈ ಭಾಗದಲ್ಲಿ ಸುರಿಯಲಾಗಿದ್ದು, ಸುಮಾರು 100 ಅಡಿಗೂ ಎತ್ತರದಲ್ಲಿ ಮಣ್ಣನ್ನು ರಾಶಿ ಹಾಕಲಾಗಿದೆ. ಇದರಿಂದ ಕೆಳಭಾಗದ ಮನೆಗಳಿಗೆ ಭೂಕುಸಿತ ಉಂಟಾಗುವ ಭೀತಿ ಎದುರಾಗಿದೆ. ಈ ಭಾಗದಲ್ಲಿ ಮಳೆ ಜೋರಾಗಿ‌ ಬೀಳುತ್ತಿರುವುದರಿಂದ ಈಗಾಗಲೇ ‌ಮಣ್ಣು ಕೊಚ್ಚಿಹೋಗುತ್ತಿದ್ದು, ಬಹುತೇಕ ಕೃಷಿ ಪ್ರದೇಶಗಳಿಗೆ ಹಾನಿಯಾಗಿದೆ.

ಮಣ್ಣು ಕೆಳ ಭಾಗಕ್ಕೆ ಬೀಳದಂತೆ ತಡೆಗೋಡೆಯನ್ನು ನಿರ್ಮಿಸದ ಹಿನ್ನಲೆಯಲ್ಲಿ ಸಣ್ಣ ಮಳೆಗೂ ನೀರು ಸಹಿತ ಮಣ್ಣು ಕೆಳ ಭಾಗದಲ್ಲಿರುವ ಮನೆಗಳ ಮೇಲೆ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ತಡೆಗೋಡೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಶಾಸಕರ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ, ಈವರೆಗೂ ತಡೆಗೋಡೆ ನಿರ್ಮಾಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಸದ್ಯ ಪ್ರತಿದಿನ ಸುಳ್ಯ ಪರಿಸರದಲ್ಲಿ ಮಳೆ ಸುರಿಯುತ್ತಿದ್ದು ಮಳೆ ನೀರಿಗೆ ಮಣ್ಣಿನ ರಾಶಿ ಕೆಳ ಭಾಗಕ್ಕೆ ಹರಿದಿದ್ದು, ಬಹುತೇಕ ಕೃಷಿ ತೋಟಗಳು ಹಾನಿಯಾಗಿವೆ. ಭಾರೀ ಪ್ರಮಾಣದ ಮಣ್ಣಿನ ರಾಶಿ ಇರುವ ಈ ಪ್ರದೇಶದಲ್ಲಿ ನೀರು ಹಾದು ಹೋಗಲು ಸಣ್ಣ ತೋಡನ್ನು ನಿರ್ಮಿಸಲಾಗಿದ್ದು, ಮಳೆಗಾಲದಲ್ಲಿ ಸುರಿಯುವ ಮಳೆಗೆ ಹಳ್ಳದ ಜೊತೆಗೆ ಮಣ್ಣು ಕೆಳ ಭಾಗದಲ್ಲಿರುವ ಮನೆಗಳ ಮೇಲೆ ನುಗ್ಗಿ ಜಲಸಮಾಧಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಸಚಿವ ಎಸ್.ಅಂಗಾರ ಮಣ್ಣು ಹಾಕಿರುವ ಪ್ರದೇಶದುದ್ದಕ್ಕೂ ಪ್ಲಾಸ್ಟಿಕ್ ಹೊದಿಕೆ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಆದರೆ ಇದುವರೆಗೆ ಈ ಕುರಿತಂತೆ ಯಾವುದೇ ಪ್ರಗತಿ‌ ಕಂಡುಬಂದಿಲ್ಲ.

ದೂರದೃಷ್ಟಿಯ ಫಲವಾಗಿ ಅನುಷ್ಠಾನಕ್ಕೆ ಬಂದ ಕಾಮಗಾರಿಯ ಸರಿಯಾದ ನಿರ್ವಹಣೆ ಮಾಡದ ಕಾರಣ ಕಾಮಗಾರಿಯು ಅವೈಜ್ಞಾನಿಕವಾಗಿ ಪರಿವರ್ತನೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ‌ಈ‌ ಕುರಿತು ತಕ್ಷಣ ಕ್ರಮವಹಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.

Leave a Comment

Your email address will not be published. Required fields are marked *