ಸಮಗ್ರ ನ್ಯೂಸ್: ಆರ್ಥಿಕ ಮತ್ತು ರಾಜಕೀಯ ತಲ್ಲಣಕ್ಕೆ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾದೊಂದಿಗೆ ಸಮುದ್ರ ಗಡಿ ಹಂಚಿಕೊಂಡಿರುವ ಭಾರತಕ್ಕೆ ವಲಸಿಗರ ಆತಂಕ ಎದುರಾಗಿದ್ದು, ರಾಜ್ಯ ಕರಾವಳಿಯಲ್ಲೂ ನಿಗಾ ಹೆಚ್ಚಿಸಲಾಗಿದೆ.
ಲಂಕಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಲ್ಲಿನ ಪ್ರಜೆ ಗಳು ಅಕ್ರಮವಾಗಿ ದಕ್ಷಿಣ ಭಾರತಕ್ಕೆ ಬರಲು ಯತ್ನಿಸುತ್ತಿರುವುದನ್ನು ಭಾರತೀಯ ಬೇಹು ವಿಭಾಗ ಪತ್ತೆ ಹಚ್ಚಿದೆ.
ಹಾಗಾಗಿ ಕರ್ನಾಟಕ ಸೇರಿದಂತೆ ದ. ಭಾರತದ ಕರಾವಳಿ ರಾಜ್ಯ ಗಳಿಗೆ ಕೇಂದ್ರ ಗುಪ್ತಚರ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.
ಲಭ್ಯ ಮಾಹಿತಿಯ ಪ್ರಕಾರ ತಮಿಳುನಾಡಿಗೆ ಈಗಾಗಲೇ ವಲಸಿಗರು ಬರತೊಡಗಿದ್ದಾರೆ. ಕೇರಳ, ಕರ್ನಾಟಕದ ಕರಾವಳಿಗೂ ಬರಬಹುದು ಎಂಬ ಕಳವಳ ವ್ಯಕ್ತವಾಗಿದೆ.
ಕಟ್ಟೆಚ್ಚರದಲ್ಲಿ ಭದ್ರತಾ ಸಂಸ್ಥೆಗಳು
ಈಗಾಗಲೇ ಗುಪ್ತಚರ ಇಲಾಖೆಯ ಸೂಚನೆಯನ್ವಯ ಕರಾವಳಿ ಕಾವಲು ಪೊಲೀಸ್(ಸಿಎಸ್‌ಪಿ) ಅಧಿಕಾರಿಗಳು ಸಭೆ ನಡೆಸಿ ಲಂಕನ್ನರು ಬಂದಿಳಿಯಬಹುದಾದ ತಾಣಗಳ ಮೇಲೆ ನಿಗಾ ಇರಿಸಿದ್ದಾರೆ.
ಮಂಗಳೂರು, ಹೆಜಮಾಡಿ, ಮಲ್ಪೆ, ಭಟ್ಕಳ, ಗಂಗೊಳ್ಳಿ, ಕುಮಟಾ, ಹೊನ್ನಾವರ, ಬೇಲೆಕೇರಿ ಮತ್ತು ಕಾರವಾರಗಳಲ್ಲಿ 9 ಸಿಎಸ್‌ಪಿ ಠಾಣೆಗಳು ಇದ್ದು, ಅವೆಲ್ಲವನ್ನೂ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ ಎಂದು ಸಿಎಸ್‌ಪಿ ಮೂಲಗಳು ತಿಳಿಸಿವೆ.