ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ನಡೆಯುತ್ತಿರುವ ಜನ ವಿರೋಧಿ ಗಣಿಗಾರಿಕೆ ಪ್ರದೇಶಕ್ಕೆ ಸುಳ್ಯ ತಹಶಿಲ್ದಾರ್ ಭೇಟಿ ನೀಡಿ ಅಲ್ಲಿನ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದ್ದು, ಈ ವೇಳೆ ತಹಶೀಲ್ದಾರರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಸರಿಸುಮಾರು ಒಂದು ವರ್ಷದಿಂದ ಮರ್ಕಂಜ ಗ್ರಾಮದ ಅಳವು ಪಾರೆ ಎಂಬಲ್ಲಿ ಡೆಲ್ಮಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಅಕ್ರಮ ಗಣಿಗಾರಿಗೆ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರಿಂದ ವಿರೋದ ವ್ಯಕ್ತವಾಗಿತ್ತು. ಅದರೆ ಕೆಲವು ಅಕ್ರಮ ದಾಖಲೆಗಳನ್ನು ಸಂಗ್ರಹಿಸಿ ಪರವಾನಿಗೆ ಪಡೆದುಕೊಂಡು ಗಣಿಗಾರಿಕೆಯನ್ನು ಪ್ರಾರಂಬಿಸಿದ್ದರು. ಹೀಗೆ ಮುಂದುವರಿದ ಗಣಿಗಾರಿಕೆ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ.

ಕಗ್ಗಲ್ಲಿನ ಗಣಿಗಾರಿಕೆ ಸ್ಥಳೀಯ ಜನರಿಗೆ ಭಾರೀ ಪ್ರಮಾಣದ ತೊಂದರೆ ಉಂಟಾಗಿದೆ. ಅಲ್ಲದೆ ಹತ್ತಿರದಲ್ಲಿರುವ ದೇವಸ್ಥಾನ, ಶಾಲೆ, ಮನೆಗಳ ಗೊಡೆಗಳು ಬಿರುಕು ಬಿಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಸ್ಥಳೀಯ ಸಂಘಸಂಸ್ಥೆಗಳು ತಹಶೀಲ್ದಾರ್, ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಕಾರ್ಯಾಲಾಯಕ್ಕೆ ಮನವಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ಮಂಗಳವಾರ(ಮೇ.೧೦) ತಹಶೀಲ್ದಾರ್ ಅನಿತಾಲಕ್ಷ್ಮಿ ಬಿರುಕು ಬಿಟ್ಟಿರುವ ದೇವಸ್ಥಾನ, ಮನೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಂಘ ಸಂಸ್ಥೆಯ ಸದಸ್ಯರಿಗೆ ಭರವಸೆ ನೀಡಿದ್ದಾರೆ. ಜೊತೆಗೆ ಸಮಸ್ಯೆ ಎದುರಿಸುತ್ತಿರುವ ಮನೆಯವರಿಗೆ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ಗಣಿಗಾರಿಕೆ ತಾತ್ಕಾಲಿಕ ಬಂದ್: ತಹಶಿಲ್ದಾರ್ ಅನಿತಾಲಕ್ಷ್ಮಿ ಗಣಿಪ್ರದೇಶಕ್ಕೆ ಭೇಟಿ ನೀಡುವ ಬಗ್ಗೆ ತಿಳಿದ ಗಣಿ ಸಂಬಂಧಿತ ವ್ಯಕ್ತಿಗಳು ಗಣಿಯನ್ನು ಬಂದ್ ಮಾಡಿದ್ದರು. ಅಲ್ಲದೇ ಕ್ರಶರ್ ಲಾರಿಗಳ ಓಡಾಟವೂ ಸ್ಥಗಿತವಾಗಿತ್ತು.
ಗಣಿಗಾರಿಕೆ ಸ್ಥಗಿತಗೊಳ್ಳಲು ತಾಲೂಕು ಕಚೇರಿಯಿಂದ ಮೊದಲೇ ಮಾಹಿತಿ ನೀಡಿದ್ದಾರೆ. ಆ ಕಾರಣ ಇಂದು ಸ್ಥಗಿತಗೊಂಡಿದ್ದೆ. ಹೀಗಾಗಿ ನಿಮ್ಮಲ್ಲಿ ಈ ಬಗ್ಗೆ ಮಾಹಿತಿ ನೀಡಿದವರು ಯಾರು ಎಂಬ ಪ್ರಶ್ನೆಯನ್ನು ತಹಶೀಲ್ದಾರರಿಗೆ ಹಾಕಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದು ಈ ಬಗ್ಗೆ ಮಾತನಾಡಿದ ತಹಶಿಲ್ದಾರ್ ಮತ್ತೊಮ್ಮೆ ಬರುವಾಗ ಯಾರಿಗು ಮಾಹಿತಿ ನೀಡದೆ, ಗುಪ್ತವಾಗಿ ಬಂದು ಸಮಸ್ಯೆ ಬಗ್ಗೆ ತಿಳಿಯುತ್ತೇನೆ ಎಂದು ಹೇಳಿದ್ದಾರೆ.
ಸರಕಾರಿ ಶಾಲೆ ಬಿಟ್ಟ ವಿದ್ಯಾರ್ಥಿಗಳು:
ಇನ್ನು ಇಲ್ಲಿನ ಸ್ಥಳೀಯ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಕಲ್ಲಿನ ಕ್ರಶರಿನ ಶಬ್ಧದಿಂದ ತರಗತಿಯಲ್ಲಿ ಕುಳಿತುಕೊಳ್ಳಲು ತೊಂದರೆ ಉಂಟಾಗಿದ್ದು ಹಾಗೂ ಕಲ್ಲಿನ ಕೊರೆಯಿಂದ ಜಲ್ಲಿ ಸಾಗಿಸುವ ಲಾರಿಯವರ ವೇಗದ ಚಾಲನೆಯಿಂದ ಭಯ ಉಂಟಾಗಿದೆ. ಇದರಿಂದ ಶಾಲೆಗೆ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳು ಕೂಡ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ. ಹಾಗಾಗಿ ಇಲ್ಲಿನ ಕೆಳವು ವಿದ್ಯಾರ್ಥಿಗಳು ಹತ್ತಿರದ ಶಾಲೆ ಬಿಟ್ಟು ಬೇರೆ ಶಾಲೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕೆಲವು ಬಡವರ್ಗದ ಮಕ್ಕಳು ಬೇರೆ ಶಾಲೆಗಳಿಗೆ ದಾಖಲಾಗಲು ಸಾಧ್ಯವಿಲ್ಲದೆ ಶಿಕ್ಷಣ ವಂಚಿತರಾಗುವ ಸಾಧ್ಯತೆ ಇದೆ. ಗಣಿಗಾರಿಕೆಯಿಂದ ಶಾಲೆ ಮುಚ್ಚುವ ಭೀತಿ ಎದುರಾಗಿದ್ದು, ಶಾಲಾ ಆಡಳಿತ ಮಂಡಳಿಯ ಕೆಲವರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಇನ್ನೂ ಸರಕಾರಿ ಶಾಲೆಯ ಹೋಗುತ್ತಿರುವ ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರ ಬಳಿ ಹಾಗೂ ಮುಖ್ಯಶಿಕ್ಷಕರಲ್ಲಿ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರಣ ಇವರುಗಳು ಕೂಡ ಇದರಲ್ಲಿ ಶಾಮೀಲು ಆಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಗ್ರಾಮದಲ್ಲಿ ಕಲ್ಲಿನ ಕ್ರಶರ್ ಲಾರಿಗಳಿಂದ ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತಕ್ಕೊಳಗಾದವರು ಜೀವಭಯದಿಂದ ದೂರು ಕೊಡಲೂ ಹಿಂಜರಿಯುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ಯಾವುದೇ ರಕ್ಷಣೆ ಇಲ್ಲದ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಇಲ್ಲಿ ಹಲವಾರು ಅಪಘಾತಗಳು ಕ್ರಶರ್ ಲಾರಿಗಳಿಂದ ಸಂಭವಿಸಿದ್ದು, ರಸ್ತೆಯಲ್ಲಿ ಜೀವಭಯದಿಂದಲೇ ಓಡಾಡಬೇಕಿದೆ ಎಂದು ಜನರು ತಹಶಿಲ್ದಾರರ ಬಳಿ ಅಲವತ್ತುಕೊಂಡಿದ್ದಾರೆ.

“ಜೀವ ಕೈಯಲ್ಲಿ ಹಿಡಿದುಕೊಂಡು ಮಲಗುತ್ತಿದ್ದೇವೆ” ಗ್ರಾಮಸ್ಥರ ಅಳಲು!
ಗಣಿಗಾರಿಕೆ ನಡೆಯುತ್ತಿರುವ ಜಾಗದ ಹತ್ತಿರ ವಾಸಿಸುತ್ತಿರುವ ಮನೆಯವರು ಪ್ರತಿ ದಿನ ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ಮಾಡುವಂತಾಗಿದೆ. ಕಲ್ಲು ಕ್ರಶರ್‌ನಿಂದ ಬಿರುಕು ಬಿಟ್ಟ ಮನೆಯಲ್ಲಿ ವಾಸ ಮಾಡುತ್ತಿರುವವರು ಈ ರೀತಿ ಹೇಳಿಕೊಂಡಿದ್ದಾರೆ. ನಾವು ಮನೆಯಲ್ಲಿ 3 ಜನ ಇದ್ದು ನನ್ನ ಗಂಡ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಲ್ಲು ಸ್ಪೋಟಗೊಂಡಾಗ ನಮ್ಮ ಮನೆಗೆ ಬಾಂಬ್ ಬಿದ್ದಂತೆ ಅಗುತ್ತದೆ. ಮನೆ ಅದುರುತ್ತಿದೆ, ಇದರಿಂದ ತುಂಬಾ ಭಯ ಉಂಟಾಗಿದೆ. ಯಾವಾಗ ಮನೆ ನೆಲಸಮವಾಗಿ ಬಿಡುತ್ತದೊ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮನೆಯವರ ಸಮಸ್ಯೆ ಕೇಳದೆ ಹೋದ ತಹಶಿಲ್ದಾರ್ ; ಗ್ರಾಮಸ್ಥರಿಂದ ತರಾಟೆ
ಮನೆ ಗೋಡೆ ಬಿರುಕು ಬಿಟ್ಟ ಮನೆಗೆ ಬೇಟಿ ನೀಡಿದ ತಹಶೀಲ್ದಾರ್ ಅನಿತಾಲಕ್ಷ್ಮಿ ಬಿರುಕು ಬಿಟ್ಟ ಗೋಡೆಯನ್ನು ನೋಡಿ ತೆರಳಿದ್ದಾರೆ. ಅದರೆ ಮನೆಯವರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಕೇಳದೆ ಹೋಗಿರುವುದು ಗ್ರಾಮಸ್ಥರ ಅಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಈ ವೇಳೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು “ಸಮಸ್ಯೆಯಲ್ಲಿರುವ ಮನೆಯವರ ಜೊತೆ ಮಾತನಾಡದೆ ಹೋಗುವುದು ಸರೀಯೇ?’’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಅಲರ್ಟ್ ಆದ ತಹಶೀಲ್ದಾರ್ ಮನೆಯವರ ಸಮಸ್ಯೆಯನ್ನು ಆಲಿಸಿ ತಕ್ಷಣ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
ಸ್ಥಳೀಯರು ನೀಡಿದ ಅರ್ಜಿ ಹಿಂದಕ್ಕೆ !?
ದೇವಸ್ಥಾನಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಈ ಮೊದಲು ದೇವಸ್ಥಾನದ ಸಮಿತಿಯವರು ಹಾಗೂ ಸ್ಥಳೀಯರು ಗ್ರಾಮ ಪಂಚಾಯತ್ ಹಾಗೂ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ್ದರು. ಅದರೆ ಈ ಅರ್ಜಿಯನ್ನು ಮೂರನೇ ಕೈ ಹಿಂದಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ.
ತಾಲೂಕು ಕಚೇರಿಯಲ್ಲಿ ಸ್ವೀಕಾರವಾದ ಮನವಿ ಎಲ್ಲಿ ಹೋಯ್ತು?
ಮರ್ಕಂಜ ಗ್ರಾಮದಲ್ಲಿ ಗಣಿಗಾರಿಕೆಯಿಂದ ಅಗುತ್ತಿರುವ ಸಮಸ್ಯೆ ಬಗ್ಗೆ ತಹಶೀಲ್ದಾರರಿಗೆ ಅಂಚೆ ಮುಖಾಂತರ ಮನವಿ ಸಲ್ಲಿಸಿದ್ದರು. ಅದರೆ ಈ ಮನವಿ ಬಗ್ಗೆ ತಹಶೀಲ್ದಾರ್ ಬಳಿ ಕೇಳಿದಾಗ ನನಗೆ ಯಾವುದೆ ಮನವಿ ಬಂದಿಲ್ಲವೆಂದು ಹೇಳಿಕೊಂಡಿದ್ದಾರೆ. ಈ ವೇಳೆ ಮನವಿ ನೀಡಿದ ಯುವಕರು ತಕ್ಷಣ ಅಂಚೆ ಕಚೇರಿಗೆ ತೆರಳಿ ತಹಶೀಲ್ದಾರರ ಕಛೇರಿಯಿಂದ ಎ. 27ರಂದು ರೀಸಿವ್ ಮಾಡಿಕೊಂಡ ಸಹಿ ಇರುವ ಮರುಪತ್ರವನ್ನು ಪಡೆದಿದ್ದಾರೆ. ಈ ಅದರೆ ಈ ಮನವಿಯನ್ನು ಯಾರು ಸ್ವೀಕರಿಸಿದ್ದಾರೆ? ಮತ್ತು ಪತ್ರ ಸ್ವೀಕರಿಸಿದವರು ತಹಶಿಲ್ದಾರರಿಗೆ ತಲುಪಿಸಿರಲಿಲ್ಲವೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.