ಸಮಗ್ರ ನ್ಯೂಸ್: ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರು ತಮ್ಮ ಮೃತ ಹೆಂಡತಿಯ ಶವಕ್ಕೆ 21 ವರ್ಷಗಳ ನಂತರ ಅಂತ್ಯಸಂಸ್ಕಾರ ಮಾಡಿದ ಘಟನೆ ಥಾಯ್ಲೆಂಡ್ ನಲ್ಲಿ ಬೆಳಕಿಗೆ ಬಂದಿದೆ.
ನಿವೃತ್ತ ಸೇನಾಧಿಕಾರಿ ಚಾನ್ ವಚರಕರ್ಣ್ ಅವರು 2001ರಲ್ಲಿ ಮೃತಪಟ್ಟಿದ್ದ ತಮ್ಮ ಹೆಂಡತಿಯ ಶವವನ್ನು ಆಗಿನಿಂದಲೂ ಶವಪೆಟ್ಟಿಗೆಯೊಳಗಿಟ್ಟು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರು. ಆದರೆ, ಇಷ್ಟು ವರ್ಷದವರೆಗೂ ಯಾಕೆ ಹೆಂಡತಿಯ ಶವಸಂಸ್ಕಾರ ಮಾಡಲಿಲ್ಲ ಎಂಬ ಕಾರಣ ಮಾತ್ರ ಗೊತ್ತಾಗಿಲ್ಲ.
”ಇತ್ತೀಚಿಗೆ ಇವರಿಗೆ ತಮ್ಮ ಹೆಂಡತಿಯ ಶವ ಸಂಸ್ಕಾರ ಮಾಡದೆಯೇ ತಾನು ಸತ್ತು ಹೋಗಿ ಬಿಡಬಹುದು ಎಂಬ ಆತಂಕ ಕಾಡತೊಡಗಿತ್ತಂತೆ. ಹೀಗಾಗಿ, ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ,” ಎಂದು ಸ್ಥಳೀಯ ಸ್ಟ್ರೇಟ್ ಟೈಮ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿ ತಿಳಿಸಿದೆ.
ಚಾನ್ ವಚರಕರ್ಣ್ ಪತ್ನಿಯ ಶವಸಂಸ್ಕಾರ ಕಾರ್ಯಕ್ಕೆ ಸ್ಥಳೀಯ ಸೇನಾ ಸಂಸ್ಥೆಯೊಂದು ಮುಂದೆ ಬಂದಿತು. ಬೆನ್ ಖೆನ್ ಜಿಲ್ಲೆಯಲ್ಲಿರುವ ಇವರ ಮನೆಯಲ್ಲಿದ್ದ ಶವಪೆಟ್ಟಿಗೆಯೊಳಗಿನ ಕಳೆಬರಹಕ್ಕೆ ಅಂತ್ಯಸಂಸ್ಕಾರ ಮಾಡಲಾಯಿತು.
ನಿವೃತ್ತ ಸೇನಾಧಿಕಾರಿಯ ಪತ್ನಿ 2001ರಲ್ಲಿ ಹೈ ಬಿಪಿ ಆಗಿ ಮಿದುಳು ಕಾರ್ಯ ಸ್ಥಗಿತಗೊಂಡು ಸಾವನ್ನಪ್ಪಿದ್ದರು. ಅವರ ಪಾರ್ಥಿವ ಶರೀರವನ್ನು ಆಗ ಬೌದ್ಧ ಪದ್ಧತಿಯಂತೆ ಸಂಸ್ಕಾರ ಮಾಡಲು ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಚಾನ್ ವಚರಕರ್ಣ್ ತಮ್ಮ ಪತ್ನಿಯ ದೇಹವಿದ್ದ ಶವಪೆಟ್ಟಿಗೆಯನ್ನು ಮನೆಗೆ ವಾಪಸ್ ತಂದಿಟ್ಟುಕೊಂಡು ಇಷ್ಟು ವರ್ಷದ ಅದರ ಜೊತೆಯಲ್ಲೇ ವಾಸವಿದ್ದರೆನ್ನಲಾಗಿದೆ.