ಸಮಗ್ರ ವಿಶೇಷ: ಅವಳೇನೂ ಸಂಪತ್ತಿನಲ್ಲಿ ಶ್ರೀಮಂತಳಾಗಿರಲಿಲ್ಲ ಆದರೆ ಪ್ರೀತಿಯಲ್ಲಿ ಯಾರನ್ನಾದರೂ ಮುಳುಗಿಸುವ ಪ್ರೇಮದ ಗಣಿಯಾಗಿದ್ದಳು. ಅವಳ ಬದುಕನ್ನು ಕಂಡಾಗ ಒಮ್ಮೊಮ್ಮೆ ನನಗನ್ನಿಸುತ್ತಿತ್ತು, ಇವಳೇಕೆ ಸಹನಾಮೂರ್ತಿಯಾದಳು. ಜೀವನವೆಲ್ಲ ಅವಳು ತನಗಾಗಿ ಬದುಕಿದ್ದು ತುಂಬಾ ಕಡಿಮೆ ತನ್ನವರ ಖುಷಿಗಾಗಿಯೇ ಜೀವ ಜೀವನ ಸವೆಸಿದ್ದಳು.
ಹೊಟ್ಟೆ ಯೊಳಗೆ ಮಗುವ ಹೊತ್ತುಕೊಂಡು ಗುಡ್ಡ ಹತ್ತತ್ತಿದ್ದಳು, ಕಟ್ಟಿಗೆ ಹೊರುತ್ತಿದ್ದಳು. ಕಂಕುಳಲಿ ಮಗುವ ಹಿಡಿದು ಮನೆಯ ಮುನ್ನಡೆಸಿದಳು. ಇದ್ದ ಒಂದು ರೂಪಾಯಿಯಲ್ಲಿ ತನ್ನ ಮಕ್ಕಳಿಗೆ ಜಗವ ತೋರಿದ ಮಹಾಮಾತೆ ಅವಳು. ತನ್ನ ಮಕ್ಕಳಿಗಾಗಿ ಅದೆಷ್ಟೋ ಬಾರಿ ಊಟ ಬಿಟ್ಟಿದ್ದಳು , ಅದೆಷ್ಟೋ ರಾತ್ರಿ ನಿದ್ದೆಯನ್ನು ತ್ಯಾಗ ಮಾಡಿದ್ದಾಳೆ. ಅವಳೊಳಗೆ ಇದ್ದದೊಂದೆ ಆಸೆ ನನ್ನ ಮಕ್ಕಳು ಎತ್ತರಕ್ಕೆ ಬೆಳೆಯಬೇಕು ಎಂಬುವುದು.
ಅವಳ ಮಮತಾಮಯಿ ಮನಸಿಗೆ ಕರಗದವರೇ ಇಲ್ಲ. ಕುಟುಂಬದಿಂದ ಹೊರಗಿನವರನ್ನು ಕೂಡಾ ಕರೆದು ಹೊಟ್ಟೆ ತುಂಬಾ ಊಟ ಮಾಡಿಸುತ್ತಾಳೆ. ಬೇರೆಯವರ ಕಷ್ಟಗಲೋದಗಿದಾಗ ತನಗೆ ಕಷ್ಟ ಬಂದಿದೆ ಎಂಬಂತೆ ಮರುಗುತ್ತಾಳೆ.
ಆಡಿ ಬಾ ನನ್ನ ಕಂದ, ಅಂಗಾಲ ತೊಳೆದೇನು ತೆಂಗಿನ ಕಾಯಿ ತಿಳಿನೀರ, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಬಂಗಾರದ ಮೊರೆ ತೊಳೆದೇನಾ…ಎಂದು ಅಂದಿನ ತಾಯಂದಿರು ಹಾಡುತ್ತಿದ್ದರೆ, ಅವರಿಗೆ ಸಮಯವಿತ್ತು. ತನ್ನ ಕಂದನ ಸಾಕುವ ಖುಷಿಯಿತ್ತು. ಇಂದಿನ ತಾಯಂದಿರಿಗೆ ಮಗುವನ್ನು ಸಾಕುವ ಮನಸ್ಸಿದೆ, ಸಮಯವಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.
ಅಮ್ಮ ಎಂದಿಗೂ ಬದಲಾಗದ ಜೀವ. ಆದರೆ ಅಮ್ಮ ನಿರ್ವಹಿಸುವ ಪಾತ್ರಗಳು ಬದಲಾಗಿವೆ. ಬದಲಾದ ಕಾಲ ಘಟ್ಟದಲ್ಲಿ ಅಮ್ಮನ ಪರಿಸ್ಥಿತಿಯನ್ನು ನಿಭಾಯಿಸುವ ಸಂದರ್ಭಗಳು ಬದಲಾಯಿಸಿವೆ. ದುಡಿಮೆ, ಸಂಸಾರ, ಜೀವನದ ಮಜಲುಗಳು ಇಂದಿನ ಹೆಣ್ಣು ಮಕ್ಕಳನ್ನು ಬೇರೊಂದು ದಾರಿಯಲ್ಲಿ ನಡೆಸುತ್ತಿವೆ. ಅಮ್ಮನ ದಾರಿಯಲ್ಲಿ ಮನೆ, ಗಂಡ, ಮಕ್ಕಳು, ಸಂಸಾರ, ಹಬ್ಬ, ತವರುಮನೆ ಇವೇ ಉತ್ತುಂಗದಲ್ಲಿದ್ದ ಕಾಲ ಒಂದಿತ್ತು. ಆದರೆ ಮಗಳ ಕಾಲದಲ್ಲಿ ವಿದ್ಯೆ, ಸ್ನಾತಕೋತ್ತರ ಪದವಿ, ದುಡಿಮೆ, ಸ್ವಾವಲಂಬನೆ, ವೈಯಕ್ತಿಕ ಬದುಕು ಇವೇ ಪ್ರಾಶಸ್ತ್ಯ ಪಡೆದಿವೆ.
ಅಮ್ಮ ಇಂದು ಮಮ್ಮಿಯಾಗಿದ್ದಾಳೆ ಅಷ್ಟೇ… ಪ್ರೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂದಿನ ಅಮ್ಮ ಸ್ಪರ್ಧಾ ಜಗತ್ತಿನ ಅಮ್ಮನಾಗಿದ್ದಾಳೆ. ಎಲ್ಲದರಲ್ಲಿಯೂ ಸ್ಪರ್ಧೆಯೇ ಸರಿ ಎನ್ನುವ ಅಮ್ಮನಾಗಿದ್ದಾಳೆ. ದುಡಿಮೆಯ ಜೊತೆ ಮಗು ಸಾಕುವ ದೊಡ್ಡ ಜವಾಬ್ದಾರಿ ಇಂದು ದುಡಿಯುವ ಹೆಣ್ಣುಮಕ್ಕಳ ಮೇಲೆ ಇದೆ.
ಅಮ್ಮ ತ್ಯಾಗಮೂರ್ತಿ ಎಂಬ ಮಾತಿದೆ. ಅದು ಸತ್ಯವೂ ಹೌದು. ತನ್ನ ಖುಷಿಗಳನ್ನು ತ್ಯಾಗ ಮಾಡಿ ವರ್ಷಕ್ಕೆ ಒಂದು ಬಾರಿ ಬಟ್ಟೆ, ಪ್ರವಾಸ ಎಂದು ಖರ್ಚು ಮಾಡುತ್ತಿದ್ದರು ಅಂದಿನ ಅಮ್ಮಂದಿರು. ತಾವು ದುಡಿದು ಮಕ್ಕಳನ್ನು ಎಂಜಿನಿಯರ್, ಡಾಕ್ಟರ್ ಮಾಡುವ ಕನಸು ಕಟ್ಟಿಕೊಳ್ಳುತ್ತಾರೆ ಇಂದಿನ ಅಮ್ಮಂದಿರು.
ಅಮ್ಮನನ್ನು ವರ್ಣಿಸಲು ಪದಗಳ ಕೊರತೆಯಾಗಬಹುದು. ಆದರೆ ಪದಗಳಿಗೂ ನಿಲುಕದ ಪ್ರೀತಿಯ ಗಣಿ ಅಮ್ಮ. ಅಮ್ಮನ ದಿನವಿಂದು, ನಾ ಬೇಡುವೆನು ಇಂದು, ಜನ್ಮ, ಜನ್ಮಕ್ಕೂ ನಿನ್ನನ್ನೇ ತಾಯಿಯಾಗಿ ಆ ದೇವರು ನೀಡಲೆಂದು… ಅಮ್ಮಾ….ಎಂದೆಂಗಿಗೂ ನಗುತಿರು ನೀನು…