ಸಮಗ್ರ ನ್ಯೂಸ್ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಭಾನುವಾರ (ಮೇ 8) ಮಧ್ಯಾಹ್ನ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ.
ಇದರ ಪರಿಣಾಮದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕೈದು ದಿನ ಇನ್ನಷ್ಟು ಚುರುಕಾಗಲಿದೆ. ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಓರಿಸ್ಸಾದತ್ತ ಮಾರುತಗಳು ಚಲಿಸಲಿದ್ದು, ಆ ಭಾಗಗಳಲ್ಲಿ ಹೆಚ್ಚು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಬೆಂಗಳೂರು, ಬೆಂ. ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಮೈಸೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ದಾವಣಗೆರೆಯಲ್ಲಿ ಮುಂದಿನ 4 ದಿನ ಗುಡುಗು ಮಿಂಚು ಸಹಿತ ಭಾರಿ ಮಳೆ ಬೀಳಲಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲೂ ಧಾರಾಕಾರವಾಗಿ ಮಳೆ ಬೀಳಲಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತ ಒಂದೆರೆಡು ದಿನಗಳಲ್ಲಿ ಚಂಡಮಾರುತವಾಗಿ ಸೃಷ್ಟಿಯಾಗಲಿದ್ದು, ಓರಿಸ್ಸಾದತ್ತ ಮಾರುತಗಳು ಚಲಿಸಲಿವೆ. ಹವಾಮಾನ ಇಲಾಖೆ ಸೈಕ್ಲೋನ್‌ಗೆ ಇನ್ನೂ ಹೆಸರು ಕೊಟ್ಟಿಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ಅಷ್ಟೇನೂ ಪರಿಣಾಮ ಇಲ್ಲದಿದ್ದರೂ ಭರ್ಜರಿ ಮಳೆಯಾಗಲಿದೆ ಎಂದಿದ್ದಾರೆ.