ಸಮಗ್ರ ನ್ಯೂಸ್: ವಾರದ ಕೊನೆಯ ದಿನದ ವಹಿವಾಟಿನಲ್ಲಿ ಷೇರುಪೇಟೆ ಹೂಡಿಕೆದಾರರು ₹5.10 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಇಂದು ವಹಿವಾಟು ಆರಂಭದಿಂದಲೂ ಷೇರುಪೇಟೆ ಸೂಚ್ಯಂಕಗಳು ಕುಸಿತ ದಾಖಲಿಸಿದವು.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಅಂಶ (ಶೇ 1.95) ಇಳಿಕೆಯಾಗಿ 54,614.61 ಅಂಶ ತಲುಪಿತ್ತು. ಅದರಿಂದಾಗಿ ಸೆನ್ಸೆಕ್ಸ್ ಸಾಲಿನ ಕಂಪನಿಗಳು ₹5,10,150.97 ಕೋಟಿ ನಷ್ಟಕ್ಕೆ ಒಳಗಾದವು. ಲೋಹ, ಐಟಿ, ಬ್ಯಾಂಕ್, ಆಟೊಮೊಬೈಲ್ ಹಾಗೂ ಹಣಕಾಸು ವಲಯದ ಕಂಪನಿಗಳ ಷೇರುಗಳು ಶೇಕಡ 2ರಿಂದ 3ರಷ್ಟು ಕುಸಿತ ಕಂಡಿವೆ.
ಗುರುವಾರ ರಾತ್ರಿ ಅಮೆರಿಕದ ಷೇರುಪೇಟೆ, ಜಾಗತಿಕ ಷೇರುಪೇಟೆಗಳಲ್ಲಿ ಉಂಟಾಗಿರುವ ಕುಸಿತ, ಬ್ಯಾಂಕ್ ಬಡ್ಡಿ ದರ ಹೆಚ್ಚಳ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರಾಟ ಮಾಡಿರುವುದು ದೇಶದ ಷೇರುಪೇಟೆಗಳಲ್ಲಿ ತಲ್ಲಣ ಸೃಷ್ಟಿಸಿದೆ.
ಷೇರುಪೇಟೆ ಮಾಹಿತಿ ಪ್ರಕಾರ, ಗುರುವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹2,074.74 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಇಂದು ಬಜಾಜ್ ಫೈನಾನ್ಸ್, ವಿಪ್ರೊ, ಆಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಇನ್ಫೊಸಿಸ್ ಹಾಗೂ ಎಚ್‌ಸಿಎಲ್ ಟೆಕ್ನಾಲಜೀಸ್ ಷೇರುಗಳು ನಷ್ಟಕ್ಕೆ ಒಳಗಾಗಿವೆ. 12ಕ್ಕೆ ಸೆನ್ಸೆಕ್ಸ್ 875.23 ಕಡಿಮೆಯಾಗಿ 54,827 ಅಂಶಗಳು ಹಾಗೂ ನಿಫ್ಟಿ 271.10 ಅಂಶ ಕಡಿಮೆಯಾಗಿ 16,411.55 ಅಂಶಗಳಲ್ಲಿ ವಹಿವಾಟು ನಡೆದಿದೆ.
ಇಂದಿನ ಸೆನ್ಸೆಕ್ಸ್ ಕುಸಿತದ ಹಿಂದಿನ ಪ್ರಮುಖ ಕಾರಣವೆಂದರೆ ಹಣದುಬ್ಬರವನ್ನು ನಿಯಂತ್ರಿಸಲು ದೇಶದ ಕೇಂದ್ರ ಬ್ಯಾಂಕ್ ಯುಎಸ್ ಫೆಡರಲ್ ರಿಸರ್ವ್ 50ಬಿಪಿಎಸ್ ಬಡ್ಡಿದರ ಹೆಚ್ಚಳ ಮಾಡಿರುವುದು ಆಗಿದೆ. ಏರುತ್ತಿರುವ ಬಡ್ಡಿದರಗಳು ಜಾಗತಿಕ ಆರ್ಥಿಕ ಬೆಳವಣಿಗೆಗೆ ತೊಂದರೆ ಉಂಟು ಮಾಡಬಹುದು ಎಂದು ಹೂಡಿಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಮಾರುಕಟ್ಟೆಯು ಕುಸಿತವನ್ನು ಕಾಣುತ್ತಿದೆ. ಯುಎಸ್ ಫೆಡರಲ್ ರಿಸರ್ವ್ ಹಾಗೂ ಇತರ ಕೆಲವು ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರವನ್ನು ಎದುರಿಸಲು ಬಡ್ಡಿದರವನ್ನು ಯೋಜಿಸಿದ್ದಕ್ಕಿಂತ ಅಧಿಕ ಏರಿಕೆ ಮಾಡಬಹುದು ಎಂದು ಮಾರುಕಟ್ಟೆ ಹೂಡಿಕೆದಾರರು ಆತಂಕ ಹೊಂದಿದ್ದಾರೆ. ಈ ಬೆನ್ನಲ್ಲೇ ಮಾರುಕಟ್ಟೆಯು ಪಾತಾಳಕ್ಕೆ ಇಳಿಯುತ್ತಿದೆ.