ಸಮಗ್ರ ನ್ಯೂಸ್: ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಯ ಫೋಟೋವನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಲ್ಲದೆ, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಯುವಕನಿಗೆ ಹುಡ್ಕೊಂಡು ಬಂದು ಯುವತಿ ಥಳಿಸಿದ ಘಟನೆ ನಡೆದಿದೆ.
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ಜಿಲ್ಲೆಯ ಆಲೂರಿನ ಶಾನವಾಜ್ ಎಂಬಾತನಿಗೆ ಫೇಸ್ ಬುಕ್ ನಲ್ಲಿ ಯುವತಿಯೋರ್ವಳು ಪರಿಚಯ ಆಗಿದ್ದಳು. ಆತ ಯುವತಿಯೊಂದಿಗೆ ಸಲುಗೆ ಬೆಳೆಸಿ ಆಕೆಯ ಫೋಟೋಗಳನ್ನು ಪಡೆದುಕೊಂಡಿದ್ದ. ಬಳಿಕ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಹೆದರಿಸಿ ಯುವತಿಯ ಕೈಯಿಂದ ದುಡ್ಡು ಪೀಕಿಸಿದ್ದ. ಯುವತಿ ದುಡ್ಡು ಕೊಟ್ಟ ಮೇಲೂ ಆಕೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದ.
ಇದರಿಂದ ಕೋಪಗೊಂಡ ಯುವತಿ, ಆಲೂರಿನಲ್ಲಿರುವ ಶಾನವಾಜ್ ನ ಮನೆಗೆ ಹುಡ್ಕೊಂಡು ಬಂದು ಥಳಿಸಿದ್ದಾಳೆ. ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿ ಶಾನವಾಜ್ ನನ್ನ ಪೊಲೀಸರಿಗೆ ಒಪ್ಪಿಸಿದ್ದಾಳೆ.