ಸಮಗ್ರ ನ್ಯೂಸ್: ನಭೋಮಂಡಲದ ಕೌತುಕ, ವರ್ಷದ ಮೊದಲ ರಾಹುಗ್ರಸ್ತ ಸೂರ್ಯಗ್ರಹಣ ಏಪ್ರಿಲ್ 30 ರಂದು ಸಂಭವಿಸಲಿದೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದೆ ಇದ್ದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣವೂ ಕೆಟ್ಟ ಪರಿಣಾಮ ಬೀರುತ್ತದೆ ಅಂತಾರೆ. ಸೂರ್ಯಗ್ರಹಣದ ದಿನವೇ, ಶನಿ ಅಮಾವಾಸ್ಯೆ ಕೂಡ ಬಂದಿರೋದು ಇನ್ನೊಂದು ಕಾಕತಾಳೀಯ.
ಏಪ್ರಿಲ್ 30ರಂದು ನಭೋಮಂಡಲದಲ್ಲಿ ಸೂರ್ಯನ ಮೇಲೆ ಗ್ರಹಣದ ಕಾರ್ಮೋಡ ಇರಲಿದೆ. ಆದ್ರೆ ಭಾರತದಲ್ಲಿ ನಭೋಮಂಡಲದ ಈ ವಿಸ್ಮಯ ಗೋಚರಿಸಲ್ಲ. ಚಿಲಿ, ಅರ್ಜೆಂಟೀನಾ, ಉರುಗ್ವೆ, ಆಗ್ನೇಯಾ ಪೆರು, ದಕ್ಷಿಣ ಹಾಗೂ ಪಶ್ಚಿಮ ಅಮೆರಿಕದಲ್ಲಿ ಗೋಚರಿಸಲಿದೆ. ಆದರೆ ಗ್ರಹಣವನ್ನು ಸೂತಕ ಎಂದೇ ಹಿಂದೂ ಧರ್ಮದಲ್ಲಿ ಪರಿಗಣಿಸಲಾಗುತ್ತೆ. ಸೂರ್ಯನಿಗೆ ಅಥವಾ ಚಂದ್ರನಿಗೆ ಗ್ರಹಣ ಬಂದ್ರೆ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಮಾತ್ರವಲ್ಲದೇ ಪ್ರಕೃತಿಗೂ ಹಾನಿ, ಭೂಮಿಯ ಮೇಲೆ ಗ್ರಹಣದ ಕರಿಛಾಯೆ ಬೀಳಲಿದೆ ಎನ್ನುವ ಪ್ರತೀತಿ ಇದೆ. ಇನ್ನು ಅದೇ ದಿನ ಶನಿ ಅಮಾವಾಸ್ಯೆಯೂ ಇದೆ. ಹೀಗಾಗಿ ಈ ಬಾರಿಯ ಸೂರ್ಯಗ್ರಹಣ ಹೆಚ್ಚು ಪ್ರಭಾವಶಾಲಿ ಅನ್ನೋದು ಜ್ಯೋತಿಷ್ಯ ಶಾಸ್ತ್ರದ ಅಂದಾಜು.
ಭಾರತೀಯ ಕಾಲಮಾನದ ಪ್ರಕಾರ ಏಪ್ರಿಲ್ 30ರಂದು ಶನಿವಾರ ಮಧ್ಯಾಹ್ನ 12.15ಕ್ಕೆ ಆರಂಭವಾಗುವ ಗ್ರಹಣ, ಸಂಜೆ 4 ಗಂಟೆ 7 ನಿಮಿಷಕ್ಕೆ ಅಂತ್ಯವಾಗಲಿದೆ. ಭಾಗಶಃ ಸೂರ್ಯಗ್ರಹಣದ ಸಂಧರ್ಭದಲ್ಲಿ ಶನಿ ಅಮಾವಾಸ್ಯೆ ಇರುವುದರಿಂದ ಕೆಲ ಶನಿದೇಗುಲ ಸೇರಿದಂತೆ ಶಿವ ದೇಗುಲದಲ್ಲಿಯೂ ವಿಶೇಷ ಪೂಜೆಗಳು ನಡೆಯಲಿದೆ.
ವಿಜ್ಞಾನಿಗಳ ಪ್ರಕಾರ ಕೌತುಕ, ಜ್ಯೋತಿಷಿಗಳ ಪ್ರಕಾರ ಭೂಮಿಗೆ ಕೆಡುಕಿನ ನಂಬಿಕೆ. ಒಟ್ಟಾರೆ ವರ್ಷದ ಮೊದಲ ಸೂರ್ಯಗ್ರಹಣದ ವಿಸ್ಮಯ ಇಂದು ನಡೆಯಲಿದೆ.