ಸಮಗ್ರ ನ್ಯೂಸ್: : ಕಾರಿನ ಚಾಲಕನನ್ನು ಬಾಡಿಗೆಗೆ ಕರೆದೊಯ್ದು ಬಳಿಕ ಬೆದರಿಸಿ , ಹಲ್ಲೆಗೈದು ಸುಲಿಗೆ ಮಾಡಿದ ಘಟನೆ ನಡೆದಿದೆ. ಬಡಗಬೆಟ್ಟುವಿನ ಶಾಂತಿನಗರದ ಶ್ರೀಧರ ಭಕ್ತ(61) ಕಾರು ಚಾಲಕರಾಗಿದ್ದು, ಎ.27 ರಂದು ರಾತ್ರಿ ಈ ಘಟನೆ ನಡೆದಿದೆ.
ಶ್ರೀಧರ್ ಅವರು ಮಣಿಪಾಲ ಟೈಗರ್ ಸರ್ಕಲ್ ಬಳಿ ಸಂಜೆ ತನ್ನ ಕಾರನ್ನು ಬಾಡಿಗೆಗೆ ನಿಲ್ಲಿಸಿದ್ದು, ಸುಮಾರು 35ರಿಂದ 45 ವರ್ಷ ಪ್ರಾಯದ ತುಳು ಮಾತನಾಡುವ ನಾಲ್ಕು ಮಂದಿ ಬಂದು, ಕಾರವಾರಕ್ಕೆ ಹೋಗಲು ಕಾರನ್ನು ಬಾಡಿಗೆ ಗೊತ್ತು ಮಾಡಿ ಕರೆದುಕೊಂಡು ಹೋಗಿದ್ದರು.
ರಾತ್ರಿ 8.40 ಗಂಟೆಗೆ ಅಂಕೋಲ ರೈಲ್ವೆ ನಿಲ್ದಾಣದ ಸಮೀಪ ಕಾರನ್ನು ಆರೋಪಿಗಳು ನಿಲ್ಲಿಸಲು ಹೇಳಿ, ಹಿಂಬದಿಯಲ್ಲಿದ್ದ ಒಬ್ಬ ವ್ಯಕ್ತಿಯು ಶ್ರೀಧರ ಭಕ್ತರ ಕುತ್ತಿಗೆಯನ್ನು ಒತ್ತಿ ಹಿಡಿದು, ಉಳಿದ ಮೂವರು ಅವರನ್ನು ಚಾಲಕ ಸೀಟಿನಿಂದ ಹಿಂದಿನ ಸೀಟಿಗೆ ಎಳೆದು ಕುಳ್ಳಿರಿಸಿದರು. ನಂತರ ಚೂರಿ ತೋರಿಸಿ, ಶ್ರೀಧರ ಭಕ್ತ ಪರ್ಸ್‌ನಲ್ಲಿದ್ದ 3000ರೂ. ನಗದು ಹಾಗೂ ಕೈಯಲ್ಲಿದ್ದ ವಾಚ್ ತೆಗೆದುಕೊಂಡರು.
ಬಳಿಕ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಕಾರನ್ನು ಚಲಾಯಿಸಿಕೊಂಡು ರಾತ್ರಿ 11.30ರ ಸುಮಾರಿಗೆ ಕುಂದಾಪುರದ ಆನೆಗುಡ್ಡೆಗೆ ಕರೆದುಕೊಂಡು ಬಂದಿದ್ದು, ಎಟಿಎಂ ಬಳಿ ಕಾರನ್ನು ನಿಲ್ಲಿಸಿ ಹಣ ತೆಗೆದು ತರುವಂತೆ ಶ್ರೀಧರ ಭಕ್ತನಿಗೆ ಹೇಳಿದರು. ಕಾರಿನಿಂದ ಇಳಿದು ಎ.ಟಿ.ಎಂ ನ ಒಳಗೆ ಹೋದ ಶ್ರೀಧರ್ ಭಕ್ತ, ಬಳಿಕ ಹೊರಗೆ ಬಂದಿದ್ದು, ಈ ವೇಳೆ ಅವರು ಸ್ಥಳದಿಂದ ಓಡಿ ಹೋಗಿ ಪರಾರಿಯಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.