ಬೃಹತ್ ಶಿಲಾಯುಗ ಸಂಸ್ಕೃತಿಯು, ಕರ್ನಾಟಕವೂ ಒಳಗೊಂಡಂತೆ ದಕ್ಷಿಣ ಭಾರತದ ಒಂದು ಪ್ರಮುಖ ಇತಿಹಾಸಪೂರ್ವ ಯುಗದ ಸಂಸ್ಕೃತಿಯಾಗಿದೆ. ಇದು ಸಮಾಧಿ ಪ್ರಧಾನ ಸಂಸ್ಕೃತಿಯಾಗಿದ್ದು, ತನ್ನ ವೈವಿಧ್ಯಮಯ ಸಮಾಧಿಗಳಿಂದಲೇ ಚಿರಪರಿಚಿತವಾಗಿದೆ.
ಕರ್ನಾಟಕದ ಪಶ್ಚಿಮ ಕರಾವಳಿ ಮತ್ತು ಕೇರಳದಲ್ಲಿ ಈ ಸಂಸ್ಕೃತಿಗೆ ಸಂಬಂಧಿಸಿದ ವಿಶಿಷ್ಠ ಮಾದರಿಯ ಗುಹಾ ಸಮಾಧಿಗಳನ್ನು ಕೆಂಪು ಮುರಕಲ್ಲಿನಲ್ಲಿ ಅಗೆದು ಮಾಡಲಾಗಿದೆ.
ಇಂತಹ ಒಂದು ಅಪರೂಪದ ಗುಹಾ ಸಮಾಧಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ, ರಾಮಕುಂಜ ಗ್ರಾಮದ ಆತೂರು-ಕುಂಡಾಜೆಯ ರ‍್ಕಾರಿ ಗೇರುಬೀಜದ ತೋಟದಲ್ಲಿ ಕಂಡು ಬಂದಿದೆ ಎಂದು ಶರವು ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಮುರುಗೇಶಿಯವರು ತಿಳಿಸಿದ್ದಾರೆ.
ಗುಹಾ ಸಮಾಧಿಗಳು ಎಂದರೆ ಏನು?
ಗುಹಾ ಸಮಾಧಿಗಳು, ಬೃಹತ್ ಶಿಲಾಯುಗ ಕಾಲದಲ್ಲಿ ರಚಿಸಲಾದ ಸಮಾಧಿಗಳು. ಸಮಾಧಿಯ ಮಧ್ಯಭಾಗದಲ್ಲಿ ಸುಮಾರು ಎರಡರಿಂದ ಮೂರು ಅಡಿ ವ್ಯಾಸದ ರಂಧ್ರವನ್ನು ಸುಮಾರು ಒಂದು ಮೀಟರ್ ಆಳದ ವರೆಗೆ ಸಿಲಿಂಡರ್ ಆಕಾರದಲ್ಲಿ ಕೆಂಪು ಮುರಕಲ್ಲಿನ ಭೂಮಿಯಲ್ಲಿ ಕೊರೆಯಲಾಗುತ್ತದೆ. ಇದರ ಕೆಳಭಾಗದಲ್ಲಿ ಅರ್ಧ ಗೋಳಾಕೃತಿಯ ಗುಹೆಯನ್ನು ಅಗತ್ಯವಾದ ಆಳ ಹಾಗೂ ಸುತ್ತಳತೆಯೊಂದಿಗೆ ಅಗೆದು ರಚಿಸಲಾಗುತ್ತದೆ. ಇದು ಬಹುತೇಕ ಬೌದ್ಧ ಸ್ಥೂಪಗಳ ರಚನೆಯನ್ನು ಹೋಲುತ್ತದೆ.
ಕರ್ನಾಟಕದ ಕರಾವಳಿಯಲ್ಲಿ ಇಂತಹ ರಚನೆಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಕೇರಳದಲ್ಲಿ, ಗುಹಾ ಸಮಾಧಿಗಳ ಪಾರ್ಶ್ವದಲ್ಲಿ ಒಂದು ಪ್ರವೇಶದ್ವಾರ ಇರುತ್ತದೆ. ಈ ಪ್ರವೇಶದ್ವಾರವನ್ನು ಆಯತಾಕಾರದಲ್ಲಿ ಬಾಗಿಲ ದಾರಂದದಂತೆ ರಚಿಸಲಾಗಿರುತ್ತದೆ. ಆದರೆ, ಎರಡೂ ಕಡೆ ಸಮಾಧಿಯ ಮಧ್ಯಭಾಗದಲ್ಲಿ ಎರಡು ಅಥವಾ ಮೂರು ಅಡಿಯ ವ್ಯಾಸದ ರಂಧ್ರ ಸಾಮಾನ್ಯವಾಗಿ ಕಂಡು
ಬರುತ್ತದೆ.
ಸಾಮಾನ್ಯವಾಗಿ, ಬೃಹತ್ ಶಿಲಾಯುಗದ ಸಮಾಧಿಗಳ ಇರುವನ್ನು ಗುರುತಿಸಲು, ಆ ಕಾಲದಲ್ಲಿ ಸಮಾಧಿಯ ಮೇಲೆ ಅಥವಾ ಸಮಾಧಿಯ ಸಮೀಪದಲ್ಲಿ, ದೊಡ್ಡ, ದೊಡ್ಡ ಕಲ್ಲಿನ ಕಂಭಗಳನ್ನು ನಿಲ್ಲಿಸುತ್ತಿದ್ದರು, ಇಲ್ಲವೇ, ಸಮಾಧಿಯ ಮೇಲ್ಭಾಗದಲ್ಲಿ ದೊಡ್ಡ, ದೊಡ್ಡ ಕಾಡು ಕಲ್ಲುಗಳ ಶಿಲಾ ವರ್ತುಲವನ್ನು ರಚಿಸುತ್ತಿದ್ದರು, ಕೆಲವು ಕಡೆ ಸಮಾಧಿಯ ಮೇಲೆ ಕಲ್ಲುಗಳ ರಾಶಿಯನ್ನು ಹೇರಿ, ಕಲ್ಗುಪ್ಪೆಗಳನ್ನು ನಿರ್ಮಿಸಿ ಸಮಾಧಿಗಳ ಇರುವನ್ನು ನಿರ್ದೇಶಿಸಲಾಗುತ್ತದೆ.
ಆದರೆ, ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದು ದೊಡ್ಡ ವೃತ್ತವನ್ನು ಕೆಂಪು ಮುರಕಲ್ಲಿನ ಮೇಲೆ ರಚಿಸಿ, ಸಮಾಧಿಯ ಇರುವನ್ನು ಗುರುತಿಸಿರುವುದು ಕಡಬದ ಗುಹಾ ಸಮಾಧಿಯ ವಿಶೇಷತೆಯಾಗಿದೆ. ಆ ವೃತ್ತದ ಕೆಳಭಾಗದಲ್ಲಿ ಆ ವೃತ್ತದ ವಿಸ್ತಾರಕ್ಕೆ
ಅನುಗುಣವಾಗಿ ಗುಹೆಯನ್ನು ರಚಿಸಲಾಗಿದೆ. ಆ ವೃತ್ತದ ವಿಸ್ತಾರ ಸುಮಾರು ಏಳು ಅಡಿಯಾಗಿದ್ದು, ಕೆಳಗಿನ ಗುಹೆಯೂ ಏಳು ಅಡಿ ವಿಸ್ತಾರವಾಗಿದೆ.
ಕೇರಳ ಮತ್ತು ಕರ್ನಾಟಕದ ಗುಹಾ ಸಮಾಧಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರಂಧ್ರ, ಕಡಬದ ಗುಹಾ ಸಮಾಧಿಯಲ್ಲಿ ಇಲ್ಲ. ಆದ್ದರಿಂದ, ಕಡಬದ ಸಮಾಧಿ ಒಂದು ಅಪರೂಪ ಹೊಸ ಮಾದರಿಯಾಗಿದೆ. ಗುಹೆಯ ಮಧ್ಯಭಾಗದಲ್ಲಿ ಅಗ್ನಿಕುಂಡವನ್ನು ಹೋಲುವ ಒಂದು ಗುಂಡಿ ಕಂಡು ಬಂದಿದ್ದು, ಇದೂ ಸಹ ಒಂದು ವಿಶೇಷ ಅಂಶವಾಗಿದೆ.
ಸಮಾಧಿಯನ್ನು ಪೂವೊತ್ತÃರ ದಿಕ್ಕಿಗೆ ಅಭಿಮುಖವಾಗಿ ರಚಿಸಲಾಗಿದೆ. ಗುಹೆಯ ಒಳಭಾಗದಲ್ಲಿ ಅತ್ಯಲ್ಪ ಪ್ರಮಾಣದ ಕೆಂಪು, ಕಪ್ಪು ಮತ್ತು ಕೆಂಪು ಬಣ್ಣದ ಮಡಕೆಯ ಚಿಕ್ಕ, ಚಿಕ್ಕ ಚೂರುಗಳು ಕಂಡು ಬಂದಿವೆ. ಬಹುಶಃ ಸಮಾಧಿಯ ಅವಶೇಷಗಳನ್ನು ನಿಧಿಗಳ್ಳರು ದೋಚಿರುವಂತೆ ಕಂಡು ಬರುತ್ತದೆ.