ಸಮಗ್ರ ನ್ಯೂಸ್: ದಿನ ಬೆಳಗಾದರೆ ಎದೆಯೊಡೆಯುವ ಡೈನಮೈಟ್ ಸದ್ದು. ಆಗಸದೆತ್ತರ ಚಿಮ್ಮುವ ಕಗ್ಗಲ್ಲ ಧೂಳು. ಸ್ಪೋಟದ ರಭಸಕ್ಕೆ ಬಿರುಕು ಬಿಡುತ್ತಿರುವ ಮನೆಯ ಗೋಡೆಗಳು. ಇದು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆ ಪ್ರದೇಶದಲ್ಲಿ ನಿತ್ಯ ಕಂಡುಬರುತ್ತಿರುವ ದೃಶ್ಯ. ಊರವರ ವಿರೋಧವಿದ್ದರೂ ತಲೆ ಎತ್ತಿದ ಗಣಿಗಾರಿಕೆಯಿಂದ ಇದೀಗ ಹತ್ತಿರದ ಮನೆಗಳಿಗೆ ಹಾನಿಯುಂಟಾಗಿದ್ದು, ಡೈನಮೈಟ್ ಸದ್ದು ಸ್ಥಳೀಯ ಜನರ ನಿದ್ದೆಗೆಡಿಸಿದೆ.
ವಿಡಿಯೋಗಾಗಿ ಕೆಳಗಿನ ಲಿಂಕ್ ಒತ್ತಿರಿ…
https://m.facebook.com/story.php?story_fbid=368216975253480&id=100061955421424
ಮರ್ಕಂಜ ಗ್ರಾಮದ ಆಳವುಪಾರೆ ಎಂಬಲ್ಲಿ ಕಳೆದ ಒಂದು ವರ್ಷದಿಂದ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ನಡೆಸಲು ಗ್ರಾಮಸ್ಥರ ವಿರೋಧವಿದ್ದರೂ ಕಾಣದ ಕೈಗಳ ಕೈವಾಡದಿಂದ ಗಣಿಗಾರಿಕೆ ಆರಂಭವಾಗಿದ್ದು, ಇದೀಗ ಇದರ ಪ್ರಭಾವ ಪಸರಿಸಲು ಆರಂಭವಾಗಿದ್ದು, ಸ್ಥಳೀಯ ಮನೆ ಗೋಡೆಗಳು ಬಿರುಕು ಬಿಟ್ಟಿರುವುದಾಗಿ ಸುಳ್ಯ ತಹಶಿಲ್ದಾರರಿಗೆ ಸ್ಥಳೀಯ ಮಹಿಳೆಯೋರ್ವರು ದೂರು ನೀಡಿದ್ದಾರೆ.
ಮರ್ಕಂಜ ಗ್ರಾಮವು ಈಗಾಗಲೇ ಪ್ರಕೃತಿ ವಿಕೋಪದಿಂದ ಹಾನಿಯುಂಟಾಗಿದ್ದು, ಗುಡ್ಡ ಕುಸಿತದಂತಹ ಅಪಾಯವನ್ನು ಎದುರಿಸುತ್ತಿದೆ. ಈ ನಡುವೆ ಕಳೆದೊಂದು ವರ್ಷದಿಂದ ಡೆಲ್ಮಾ ಎಂಟರ್ ಪ್ರೈಸಸ್ ಹೆಸರಿನ ಕಂಪೆನಿಯೊಂದು ಕಗ್ಗಲ್ಲಿನ ಗಣಿಗಾರಿಕೆ ನಡೆಸುತ್ತಿದೆ. ಆರಂಭದಲ್ಲಿ ಗ್ರಾಮಸ್ಥರು ಒಟ್ಟಾಗಿ ಈ ಗಣಿಗಾರಿಕೆಯ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರೂ
ಪ್ರಭಾವಿಗಳ ಒತ್ತಡದಿಂದಾಗಿ ಈ ಪ್ರತಿಭಟನೆಗಳಿಗೆ ಯಾವುದೇ ಕಿಮ್ಮತ್ತು ದೊರಕಿರಲಿಲ್ಲ.
ಗಣಿಗಾರಿಕೆ ಮಾಡುವ ಜಾಗದ ಹತ್ತಿರ ಹಲವು ಮನೆಗಳಿವೆ. ಸರಕಾರಿ ಶಾಲೆ ಇದೆ. ಗಣಿಗಾರಿಕೆಯ ನಿಯಮದಂತೆ ನಿರ್ಭೀತ ನಿರ್ಜನ ಪ್ರದೇಶವಾಗಿರದೆ ಜನನಿಬಿಡ ಪ್ರದೇಶವಾಗಿದೆ. ಹಾಗಾಗಿ ಈ ಗಣಿಗಾರಿಕೆ ಮುಗಿಯುವ ವೇಳೆ ಅರ್ಧ ಮರ್ಕಂಜ ಗ್ರಾಮವೇ ಮಾಯವಾಗುವುದು ಎಂಬ ಭಯದಿಂದ ಇಲ್ಲಿಯ ಜನತೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದರು. ಈ ವಿರೋಧಕ್ಕೆ ಬಗ್ಗದ ಈ ಗಣಿಗಾರಿಕೆ ಒಡೆತನದ ವ್ಯಕ್ತಿಗಳು ಸ್ಥಳೀಯ ವ್ಯಕ್ತಿಗಳ ಸಹಾಯದಿಂದ ಪರವಾನಗಿ ಹಾಗೂ ಇನ್ನಿತರ ದಾಖಲೆಗಳನ್ನು ಪಡೆದು ಗಣಿಗಾರಿಕೆಗೆ ಮುಹೂರ್ತ ಇಟ್ಟು ಪ್ರಾರಂಭಿಸಿರುವುದಾಗಿ ಗ್ರಾಮಸ್ಥರು ಆರೋಪಿಸುತ್ತಾರೆ.
ಕೆಲವು ರಾಜಕೀಯ ವ್ಯಕ್ತಿಗಳಿಗೆ ಹಾಗೂ ಅಧಿಕಾರಿಗಳಿಗೆ ಕಂತೆ ಕಂತೆ ಲಂಚ ನೀಡಿ ಈ ಕೆಲಸ ಪ್ರಾರಂಭಿಸಿದ್ದಾರೆ ಎಂಬ ಮಾತುಗಳೂ ಅಲ್ಲಿಂದ ಜನರಿಂದ ಕೇಳಿ ಬರುತ್ತಿದೆ.
ಹೀಗೆ ಪ್ರಾರಂಭವಾದ ಗಣಿಗಾರಿಕೆ ಈಗ ದೊಡ್ಡ ಮಟ್ಟದಲ್ಲಿ ಪರಿಸರಕ್ಕೆ ಹಾನಿಮಾಡಲು ಆರಂಭಿಸಿದೆ. ಈ ಕ್ರಶರ್ ನಿಂದ ಹಲವು ಕಡೆಗಳಿಗೆ ಜಲ್ಲಿಕಲ್ಲುಗಳು ಸಾಗಾಟವಾಗುತ್ತಿದೆ.
ಮರ್ಕಂಜ ಗ್ರಾಮದಲ್ಲಿ ಕೆಲವು ಊರುಗಳಿಗೆ ರಸ್ತೆಗಳು ಸರಿ ಇಲ್ಲ. ಈ ರಸ್ತೆ ಸರಿಪಡಿಸಲು ರಾಜಕೀಯ ವ್ಯಕ್ತಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು. ಬಳಿಕ ಅದು ಆ ಪೈಲ್ ಮೂವ್ ಆಗಿ ಟೆಂಡರ್ ಕರೆದು ಜಲ್ಲಿ, ಡಾಂಬರು ಬಂದು ರಸ್ತೆ ಸರಿಯಾದಾಗ ವರ್ಷಗಳು ಕಳೆಯುವುದು. ತಮ್ಮದೇ ಊರಿನ ಪ್ರಾಕೃತಿಕ ಸಂಪತ್ತು ಬೇರೆ ಊರಿನ ಪಾಲಾಗುತ್ತಿದ್ದು, ಮರ್ಕಂಜ ಗ್ರಾಮದ ಜನತೆ ಮಾತ್ರ ನತದೃಷ್ಟರಂತೆ ಕಾಲ ಕಳೆಯುತ್ತಿದ್ದಾರೆ.
ಇದೇ ಗ್ರಾಮದಿಂದ ಆಯ್ಕೆಯಾಗಿ ಕಾರ್ಯಭಾರ ನಡೆಸುತ್ತಿರುವ ವಿವಿಧ ಪಕ್ಷಗಳ ಹಲವು ಮುಖಂಡರಿದ್ದರೂ ಸ್ಥಳೀಯ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಮರ್ಕಂಜ ಗ್ರಾಮದ ಜನರ ದುರಾದೃಷ್ಟವೇ ಸರಿ.
ಈ ಸಮಸ್ಯೆಯ ಬಗ್ಗೆ ಯಾರಾದರೂ ಸ್ವರ ಎತ್ತಿದರೆ ಅದನ್ನು ಹತ್ತಿಕ್ಕುವ ಕೆಲಸವೂ ಅಷ್ಟೇ ಸಲೀಸಾಗಿ ನಡೆಯುತ್ತದೆ ಎನ್ನುತ್ತಾರೆ ಸ್ಥಳೀಯರು. ಮೂಲಭೂತ ಸಮಸ್ಯೆಗಳ ಕುರಿತಂತೆ ಮಾತನಾಡಿದರೆ ಆ ಧ್ವನಿಯನ್ನು ಗಣಿಗಾರಿಕೆ ಒಡೆಯರು ಅಡಗಿಸುತ್ತಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
ಗಣಿಗಾರಿಕೆ ಸ್ಥಳದ ಕೇವಲ 200 ಮೀಟರ್ ಸುತ್ತಳತೆಯಲ್ಲಿ ಹಲವು ಮನೆಗಳಿದ್ದು, ಶಾಲೆ, ಪಂಚಾಯತ್ ನೀರಿನ ಟ್ಯಾಂಕ್ ಇದೆ. ಇವೆಲ್ಲವುಗಳಿಗೂ ಈ ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ. ಇನ್ನಾದರೂ ಈ ಕುರಿತು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮವಹಿಸಬೇಕೆಂಬುದು ಸಂತ್ರಸ್ತರ ಆಗ್ರಹ.
ವಿಡಿಯೋಗಾಗಿ ಕೆಳಗಿನ ಲಿಂಕ್ ಒತ್ತಿರಿ…
https://m.facebook.com/story.php?story_fbid=368216975253480&id=100061955421424
ಸಮಗ್ರ ಸಮಾಚಾರ: ಇದು ನಿಮ್ಮ ಸಮಸ್ಯೆಗಳ ನಿಷ್ಪಕ್ಷಪಾತ ಧ್ವನಿ