Ad Widget .

15ದಿನ ಮೊದಲೇ ಶಾಲೆಗೆ ತೆರಳಲಿದ್ದಾರೆ ಚಿಣ್ಣರು| ‘ಕಲಿಕಾ ಚೇತರಿಕೆ’ ಜೊತೆಗೆ ವಿನೂತನ ಕಾರ್ಯಕ್ರಮ; ನವೀನ ಪರಿಕಲ್ಪನೆಯಲ್ಲಿ ಮೇ.16ರಿಂದ ಹೊಸ ಶೈಕ್ಷಣಿಕ ವರ್ಷ

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಜೂ.1 ರಿಂದ ಆರಂಭವಾಗಬೇಕಿದ್ದ ಶೈಕ್ಷಣಿಕ ವರ್ಷವನ್ನು ಪುನರ್ ಪರಿಶೀಲಿಸಿ ಈ ವರ್ಷ ಶಿಕ್ಷಣ ಇಲಾಖೆಯು 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಅಧಿಕೃತ ವೇಳಾಪಟ್ಟಿ ಪ್ರಕಟಿಸಿದೆ. ಮೇ 16 ರಿಂದ ಶಾಲೆ ಪ್ರಾರಂಭೋತ್ಸವದ ಜೊತೆಗೆ ‘ಕಲಿಕಾ ಚೇತರಿಕೆ’ ವಿಶೇಷ ಕಾರ್ಯಕ್ರಮದ ಮೂಲಕ ಶಾಲೆಗಳಲ್ಲಿ ತರಗತಿ ಚಟುವಟಿಕೆಗಳು ಆರಂಭವಾಗಲಿವೆ. ಇದರಿಂದ ಈ ಸಾಲಿನಲ್ಲಿ ಪ್ರತಿ ವರ್ಷಕ್ಕಿಂತ 15 ದಿನ ಮೊದಲೇ ಶಾಲೆಗಳು ಆರಂಭವಾಗಲಿವೆ.

Ad Widget . Ad Widget .

ಆರಂಭದಿಂದಲೇ ಕ್ಷೀರಭಾಗ್ಯ, ಬಿಸಿಯೂಟ ಯೋಜನೆಗಳು ಶುರುವಾಗಲಿದ್ದು, ಮಕ್ಕಳ ದಾಖಲಾತಿಗಾಗಿ ವಿಶೇಷ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಂಡಿದೆ

Ad Widget . Ad Widget .

ಶಾಲೆಗಳಿಗೆ ಮಕ್ಕಳ ಶಾಲಾ ಪ್ರವೇಶಾತಿಯನ್ನು ಮೇ 16ರಿಂದ ಆರಂಭಿಸಿ, ಜು.31ರೊಳಗೆ ಮುಕ್ತಾಯಗೊಳಿಸಲು ಸೂಚಿಸಲಾಗಿದೆ. ಶಾಲಾ ಕರ್ತವ್ಯದ ಮೊದಲನೇ ಅವಧಿಯು ಮೇ 16ರಿಂದ ಅಕ್ಟೋಬರ್‌ 2ರವರೆಗೆ ಇರಲಿದೆ. ಎರಡನೇ ಅವಧಿಯು ಅಕ್ಟೋಬರ್‌ 17ರಿಂದ 2023ರ ಏಪ್ರಿಲ್‌ 10ರವರೆಗೆ ಇರಲಿದೆ. ಅಕ್ಟೋಬರ್‌ 3ರಿಂದ 16ರವರೆಗೆ ದಸರಾ ರಜೆ ಇರಲಿದ್ದು, ಏಪ್ರಿಲ್‌ 11ರಿಂದ ಮೇ 28ರವರೆಗೆ ಬೇಸಿಗೆ ರಜೆ ಇರಲಿದೆ.

ಪ್ರಸಕ್ತ ಸಾಲಿನ ಇಡೀ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಘೋಷಿಸಿರುವ ಇಲಾಖೆಯು ಮೇ 16ರಿಂದ 30ರವರೆಗೆ ಮಕ್ಕಳಿಗೆ ಸಂಪೂರ್ಣ ಹಿಂದಿನ ವರ್ಷದ ಕಲಿಕೆಯಲ್ಲಿ ಆಗಿರುವ ಕೊರತೆ ಸರಿದೂಗಿಸುವ ಕಾರ್ಯ ಮಾಡಬೇಕು. ನಂತರ ಜೂ.1ರಿಂದ ಕಲಿಕಾ ಚೇತರಿಕೆ ಜೊತೆ ಜೊತೆಗೇ ಪ್ರಸಕ್ತ ವರ್ಷದ ಪಠ್ಯ ಬೋಧನಾ ಚಟುವಟಿಕೆಯನ್ನು ನಡೆಸಬೇಕು ಎಂದು ಶಿಕ್ಷಕರಿಗೆ ನಿರ್ದೇಶನ ನೀಡಿದೆ.

ಈ ವರ್ಷದಲ್ಲಿ 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಲಾಗಿದೆ. 60 ಸರ್ಕಾರಿ ರಜಾ ದಿನಗಳನ್ನು ಘೋಷಿಸಲಾಗಿದೆ. ಜೊತೆಗೆ 14 ದಿನ ದಸರಾ ರಜೆ, 47 ದಿನ ಬೇಸಿಗೆ ರಜೆ ನಿಗದಿಪಡಿಸಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ 10 ದಿನ, ಪರೀಕ್ಷೆ ಮತ್ತು ಸಮಗ್ರ ನಿರಂತರ ಮೌಲ್ಯಮಾಪನ (ಸಿಸಿಇ) ವಿಶ್ಲೇಷಣೆಗೆ 12 ದಿನ ಮೀಸಲಿಡಲಾಗಿದ್ದು, ಪ್ರಸಕ್ತ ವರ್ಷದ ಬೋಧನಾ ಕಲಿಕೆಗೆ 228 ದಿನ ಇರಲಿದೆ. ಕೋವಿಡ್‌ ತಹಬದಿಗೆ ಬಂದಿರುವುದರಿಂದ ಎರಡು ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ತರಗತಿ ಬೋಧನೆ ನಡೆಸಲು ಇಲಾಖೆ ವೇಳಾಪಟ್ಟಿ ಸಿದ್ಧಪಡಿಸಿದೆ. ಇದರ ಜೊತೆಗೆ ಸಾವಿತ್ರಿ ಬಾಯಿಫುಲೆ, ವಿವೇಕಾನಂದ ಜಯಂತಿ, ಕನಕದಾಸ ಜಯಂತಿ ಸೇರಿ ವಿವಿಧ ದಾರ್ಶನಿಕರ ಜಯಂತಿ ಆಚರಣೆಗೆ ನಿರ್ದೇಶನ ನೀಡಲಾಗಿದೆ.

ಮೇ 16ರಿಂದ 20ರವರೆಗೆ ದಾಖಲಾತಿ ಆಂದೋಲನ ನಡೆಸಲು ಸೂಚಿಸಲಾಗಿದೆ. ಕಳೆದ ಎರಡು ವರ್ಷ ಶಾಲೆಗಳು ಭೌತಿಕವಾಗಿ ನಡೆಯದಿರುವುದು ಮತ್ತು ಮಕ್ಕಳು ನಿರಂತರ ಹಾಜರಾಗದಿರುವುದರಿಂದ ದಾಖಲಾತಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಹಾಗಾಗಿ ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೊಷಕರ ಮನವೊಲಿಸಬೇಕು. ಶಾಲೆ ಪ್ರಾರಂಭೋತ್ಸವದ ದಿನ ಮುಂಚೆ ಜಾಥಾ, ಘೋಷಣೆ, ಬಿತ್ತಿಪತ್ರ, ಕರಪತ್ರ ಹಂಚುವ ಕೆಲಸ ಮಾಡಬೇಕು ಎಂದು ತಿಳಿಸಿದೆ.

ಶಿಕ್ಷಕರು ಮೇ 14 ಮತ್ತು 15ರಂದು ಶಾಲಾ ಸ್ವಚ್ಛತೆ, ಸುರಕ್ಷತೆ ಪರಿಶೀಲನೆ, ಪೂರ್ಣಭಾವಿ ಸಭೆ, ತರಬೇತಿ, ಸಮಾಲೋಚನಾ ಸಭೆಗಳೊಂದಿಗೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಮೇ 16ಕ್ಕೆ ಶಾಲೆ ಪ್ರಾರಂಭೋತ್ಸವ ನಡೆಸಿ ಮಕ್ಕಳನ್ನು ಸ್ವಾಗತಿಸಬೇಕು. ಶಾಲಾ ಪ್ರಾರಂಭೋತ್ಸವಕ್ಕೆ ಪೋಷಕರನ್ನು ಆಹ್ವಾನಿಸಬೇಕು ಎಂದು ಸೂಚಿಸಿದೆ. ಪ್ರಾರಂಭೋತ್ಸವದ ದಿನ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಆಕರ್ಷಣೀಯಗೊಳಿಸಬೇಕು. ಆರಂಭದ ದಿನವೇ ಮೊದಲ ಎರಡು ತರಗತಿ ಮಕ್ಕಳನ್ನು ಆಹ್ವಾನಿಸುವ ಕಾರ್ಯಕ್ರಮ ನಂತರ ಶೈಕ್ಷಣಿಕ ಚಟುವಟಿಕೆ ಆರಂಭಿಸಬೇಕು. ಬಿಸಿಯೂಟದಲ್ಲಿ ಮೊದಲ ದಿನ ಸಿಹಿ ಊಟ ತಯಾರಿಸಿ ಬಡಿಸಬೇಕು ಎಂದು ಸೂಚಿಸಲಾಗಿದೆ.

Leave a Comment

Your email address will not be published. Required fields are marked *