ಸಮಗ್ರ ಡಿಜಿಟಲ್ ಡೆಸ್ಕ್: ಮಾನವ ಸೇರಿದಂತೆ ಪ್ರಾಣಿಗಳ ದೇಹವು ಕ್ಯಾಲ್ಸಿಯಂ ಅನ್ನು ಉತ್ಪಾದಿಸುವುದಿಲ್ಲ, ಬದಲಾಗಿ ಅದು ಬಾಹ್ಯ ಆಹಾರವನ್ನು ಅವಲಂಬಿಸಿದೆ. ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಂದು. ಮೂಳೆಗಳ ಬಲವರ್ಧನೆಯಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೆ, ಕ್ಯಾಲ್ಸಿಯಂ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಮೆದುಳಿನಿಂದ ಇತರ ಭಾಗಗಳಿಗೆ ಸಂದೇಶಗಳನ್ನು ಸಾಗಿಸಲು ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲದ ಆಸಕ್ತಿದಾಯಕ ವಿಚಾರಗಳನ್ನು ನಾವಿಲ್ಲಿ ಪ್ರಸ್ತುತಪಡಿಸಿತ್ತೇವೆ. ನಮ್ಮ ದೇಹವು ಕ್ಯಾಲ್ಸಿಯಂ ಅನ್ನು ಉತ್ಪಾದಿಸುವುದಿಲ್ಲ. ಇದಕ್ಕಾಗಿ ನಾವು ದೇಹಕ್ಕೆ ಹೊರಮೂಲಗಳಿಂದ ಕ್ಯಾಲ್ಸಿಯಂ ಪೂರೈಸಬೇಕು. ಕ್ಯಾಲ್ಸಿಯಂ ಸೇವನೆಯು ಅದರ ಪೌಷ್ಟಿಕಾಂಶದ ಮೌಲ್ಯವನ್ನು ಒದಗಿಸಲು ಸಾಕಾಗುವುದಿಲ್ಲ. ಹಾಗೆಯೇ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ವಿಟಮಿನ್ ಡಿ ಅಗತ್ಯವಿದೆ.
ದೇಹದ ರಚನೆಯ ಕಾರಣದಿಂದಾಗಿ ಪುರುಷರಿಗಿಂತ ಮಹಿಳೆಯರಿಗೆ ಕ್ಯಾಲ್ಸಿಯಂ ಸೇವನೆಯು ಹೆಚ್ಚು ಅಗತ್ಯವಾಗಿದೆ. ಓರ್ವ ವಯಸ್ಕ ವ್ಯಕ್ತಿ ದಿನಕ್ಕೆ 1000 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಹೆಚ್ಚಿನ ಕ್ಯಾಲ್ಸಿಯಂ ಸೇವನೆಯೂ ಋಣಾತ್ಮಕ ಪರಿಣಾಮ ಬೀರಬಲ್ಲದು. ಈ ಬಗ್ಗೆಯೂ ಎಚ್ಚರಿಕೆ ಅಗತ್ಯವಾಗಿದೆ. ಹಾಗಾದರೆ ಕ್ಯಾಲ್ಸಿಯಂ ಅನ್ನು ಸಮರ್ಥವಾಗಿ ಪೂರೈಸುವುದು ಹೇಗೆ? ಇಲ್ಲಿದೆ ಮಾಹಿತಿ.
ಕ್ಯಾಲ್ಸಿಯಂ ಪೂರೈಕೆಗೆ ನಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳಬೇಕು. ದೈನಂದಿನ ಆಹಾರ ಕ್ರಮಗಳಲ್ಲಿ ಕ್ಯಾಲ್ಸಿಯಂ ಪೂರಿತವಾದ ಆಹಾರ ಸೇವನೆಯಿಂದ ನಾವು ಈ ಕೊರತೆಯನ್ನು ಸರಿಪಡಿಸಬಹುದು.
ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಆಹಾರಗಳಲ್ಲಿ ಪ್ರಮುಖವಾಗಿರುವುದು ಹಾಲು. ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳಲ್ಲಿ ಹಾಲು ಪ್ರಮುಖವಾದದ್ದು. ಆದಾಗ್ಯೂ, ಹಾಲಿನಲ್ಲಿ ವಿಟಮಿನ್ ಡಿ ಕೊರತೆಯಿರುತ್ತದೆ. ಆದ್ದರಿಂದ ಕ್ಯಾಲ್ಸಿಯಂ ಅನ್ನು ದೇಹವು ಹೀರಿಕೊಳ್ಳಲು ಅದರೊಂದಿಗೆ ಏನನ್ನಾದರೂ ಹೊಂದಿರಬೇಕು ಎನ್ನುತ್ತಾರೆ ತಜ್ಞರು.
ಸೋಯಾ ಮಿಲ್ಕ್: ನೀವು ಲ್ಯಾಕ್ಟೋಸ್ ಅಂಶಗಳು ಹೊಂದುವುದಿಲ್ಲ ಎಂದಾದರೆ ನಿಮಗೆ ಸಾಮಾನ್ಯ ಹಾಲು ಕುಡಿಯಲು ಕಷ್ಟವಾಗುತ್ತದೆ. ಆ ಸಂದರ್ಭದಲ್ಲಿ ಸೋಯಾ ಮಿಲ್ಕ್ ಉತ್ತಮ ಆಯ್ಕೆ. ಇದು ಕ್ಯಾಲ್ಸಿಯಂ ಅನ್ನು ಸಮೃದ್ಧವಾಗಿ ಹೊಂದಿದೆ. ಅಷ್ಟೇ ಅಲ್ಲ ಪ್ರೋಟೀನ್ ಮತ್ತು ವಿಟಮಿನ್ ಡಿಯನ್ನೂ ಹೊಂದಿದೆ.
ಬಾದಾಮಿ: ಒಂದು ಕಪ್ ತುಂಬಿದ ಬಾದಾಮಿಯು ಸುಮಾರು 385 ಮಿಲಿ ಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ, ಇದು ದೇಹದ ಕ್ಯಾಲ್ಸಿಯಂ ಅಗತ್ಯದ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಪ್ರಮಾಣವನ್ನು ಪೂರ್ಣಗೊಳಿಸುತ್ತದೆ.
ಸೋಯಾ ಮೊಸರು: ಕಡಿಮೆ ಕೊಬ್ಬು, ಹೆಚ್ಚಿನ ಪ್ರೊಟೀನ್ ಹೊಂದಿರುವ ತೋಫು (ಸೋಯಾ ಮೊಸರು) ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಅದಾಗ್ಯೂ, ಕ್ಯಾಲ್ಸಿಯಂ ಪ್ರಮಾಣವು ಬ್ರ್ಯಾಂಡ್‌ನಿಂದ ಬ್ರ್ಯಾಂಡ್‌ಗೆ ಬದಲಾಗುತ್ತದೆ. ಆದ್ದರಿಂದ ಇದನ್ನು ಖರೀದಿಸುವ ಮೊದಲು ಲೇಬಲ್ ನೋಡಿ ಕೊಳ್ಳುವುದು ಉತ್ತಮ.
ಕಡಲೆ: ಇವು ಪೋಷಕಾಂಶಗಳ ಶಕ್ತಿ ಎಂದರೆ ತಪ್ಪಿಲ್ಲ. ಕಡಲೆಯು ಪ್ರೋಟೀನ್, ಫೈಬರ್ ಮತ್ತು ರೋಗ ನಿರೋಧಕ ಅಂಶಗಳನ್ನು ಹೊಂದಿದೆ. ಒಂದು ಕಪ್ ತುಂಬಿರುವ ಕಡಲೆಯಲ್ಲಿ 75 ಮಿಗ್ರಾಂಗಿಂತ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ.
ಇದರೊಂದಿಗೆ ಮೊಟ್ಟೆ, ತರಕಾರಿಗಳಲ್ಲೂ ಕ್ಯಾಲ್ಸಿಯಂ ಹೆಚ್ಚಿರುವುದರಿಂದ ಇವುಗಳನ್ನು ಸೇವೆಸುವುದು ಉತ್ತಮ ಎನ್ನುತ್ತಾರೆ ಆಹಾರ ತಜ್ಞರು.