ಸುಳ್ಯ: ರಬ್ಬರ್ ಗಿಡಗಳನ್ನು ಕಡಿದು ನಾಶಪಡಿಸಿ ನಷ್ಟ ಉಂಟು ಮಾಡಿದ 6 ಜನ ಆರೋಪಿಗಳಿಗೆ ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ.
ಜಮೀನು ಸಂಬಂಧ ಇರುವ ತಕರಾರಿನ ದ್ವೇಷದ ಹಿನ್ನೆಲೆಯಲ್ಲಿ ಬಾಳುಗೋಡು ಗ್ರಾಮದ ನಡುತೋಟ ಗುಡ್ಡೆ ಮನೆ ಎಂಬಲ್ಲಿನ ಪದ್ಮನಾಭ ಗೌಡ ಎಂಬವರು ತಾನು ಸ್ವಾಧೀನ ಹೊಂದಿರುವ ಸುಮಾರು 6 ವರ್ಷ ಪ್ರಾಯದ 41ರಬ್ಬರ್ ಮರಗಳನ್ನು ಆರೋಪಿಗಳಾದ ಜಯಮ್ಮ,ಅನಿತಾ,ಪುರುಷೋತ್ತಮ, ಮೋಹಿನಿ,ಜಯರಾಮ,ಸುಧಾಕರ, ಎಂಬವರು ಕಡಿದು ಹಾಕಿ ನಾಶಪಡಿಸಿರುವುದಾಗಿಯೂ ರಬ್ಬರ್ ತೋಟದಲ್ಲಿ ಕಾಡು ಕಡಿಯಲು ಹೋದ ದೂರುದಾರ ಮತ್ತು ಅವರ ಸಂಬಂಧಿಕರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಆಗಿನ ಪೊಲೀಸ್ ಉಪ ನಿರೀಕ್ಷಕರಾದ ಗೋಪಾಲ ಯಂ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ ದ ಕಿರಿಯ ನ್ಯಾಯಾಧೀಶರಾದ ಯಶ್ವಂತ್ ಕುಮಾರ್ ಅವರು ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಆರೋಪ ರುಜುವಾತಾಗಿಲ್ಲವೆಂದೂ, ರಬ್ಬರ್ ಮರಗಳನ್ನು ಕಡಿದು ಹಾಕಿ ನಾಶ ಪಡಿಸಿದ ಆರೋಪ ಸಾಬೀತಾಗಿದೆ ಎಂದು 6 ಆರೋಪಿಗಳಿಗೆ ತಲಾ 10000 ರೂಪಾಯಿಗಳಂತೆ ಒಟ್ಟು 60 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳು ಸಾದ ಜೈಲುವಾಸ ಅನುಭವಿಸುವಂತೆ ತೀರ್ಪಿನಲ್ಲಿ ಹೇಳಲಾಗಿದೆ. ದಂಡದ ಮೊತ್ತದಲ್ಲಿ ಒಟ್ಟು 50 ಸಾವಿರ ರೂಪಾಯಿಯನ್ನು ನೊಂದ ದೂರುದಾ ರರಿಗೆ ನೀಡುವಂತೆ ಆದೇಶ ನೀಡಲಾಗಿದೆ. ಅಭಿಯೋಜನೆಯ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ ರವರು ಸಾಕ್ಷಿಗಳ ವಿಚಾರಣೆ ನಡೆಸಿ ವಾದಿಸಿದ್ದರು.