ಸಮಗ್ರ ನ್ಯೂಸ್: ಟವರ್ ಏರಿ ಭಗ್ನ ಪ್ರೇಮಿಯೋರ್ವ ಅವಾಂತರ ಸೃಷ್ಟಿಸಿದ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರುಕಟ್ಟೆ ಬಳಿ ನಡೆದಿದೆ. ಪ್ರೀತಿಸುತ್ತಿದ್ದ ಯುವತಿ ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ವಾಪಸ್ ಪಡೆಯುವಂತೆ ಒತ್ತಾಯಿಸಿ ಟವರ್ ಏರಿದ್ದ.
ಅಡ್ಯಾರ್ ಬಳಿಯ ನಿವಾಸಿ ಸುಧೀರ್ ಎಂಬಾತ ಬಸ್ ಕ್ಲಿನರ್. ಈತ ಪರಂಗಿಪೇಟೆಯ ಮಾರಿಪಳ್ಳದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ನಿರ್ಲಕ್ಷ್ಯ ತೋರಿದರೂ ಸುಧೀರ್ ಪದೇ-ಪದೇ ಪ್ರೀತಿಸುವಂತೆ ಪೀಡಿಸುತ್ತಿದ್ದ.
ಸುಧೀರ್ ಕಿರುಕುಳ ಸಹಿಸದ ಯುವತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪರಿಣಾಮ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಧೀರ್ ಟವರ್ ಏರಿದ್ದ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸುಧೀರ್‌ನನ್ನು ಟವರ್‌ನಿಂದ ಇಳಿಸಲು ಹರಸಾಹಸಪಟ್ಟರು. ಯಾವ ಪ್ರಯತ್ನವೂ ಫಲ ಕೊಡದಿದ್ದಾಗ ಕೊನೆಗೆ ಯುವತಿಯೇ ಬಂದು ದೂರು ವಾಪಸ್ ತೆಗೆದುಕೊಳ್ಳುವೆ ಎಂದು ಹೇಳಿದ್ದಾಳೆ. ಇದಾದ ಬಳಿಕ ಟವರ್‌ನಿಂದ ಇಳಿದಿದ್ದಾನೆ.
ಸುಮಾರು 1 ಗಂಟೆಗಳ ಈ ಪ್ರಹಸನಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರೂ ಯುವಕನಿಗೆ ಎಚ್ಚರಿಕೆ ಕೊಟ್ಟು ಪ್ರೇಯಸಿ ಜೊತೆ ಕಳುಹಿಸಿದ್ದಾರೆ. ಟವರ್ ಕೆಳಗೆ ಜನ ಭಗ್ನ ಪ್ರೇಮಿ ಮಹಾನಾಟಕವನ್ನು ಕುತೂಹಲದಿಂದ ಗಮನಿಸಿ, ಕೊನೆಗೆ ಪ್ರಕರಣ ಸುಖಾಂತ್ಯವಾದ ಬಳಿಕ ಜಾಗ ಖಾಲಿ ಮಾಡಿದರು.