ಸಮಗ್ರ ನ್ಯೂಸ್: ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆ ಸಾಗಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾನವೀಯತೆ ಮೆರೆದಿದ್ದಾರೆ.
ವಿಜಯನಗರದ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯ ಕಾರಿಣಿಯಲ್ಲಿ ಭಾಗವಹಿಸಲು ಶೋಭಾ ಕರಂದ್ಲಾಜೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಅಪಘಾತವಾಗಿರುವುದನ್ನು ಕಂಡಿದ್ದಾರೆ. ಈ ವೇಳೆ ಶೋಭಾ ಅವರು, ಕೂಡಲೇ ಕಾರು ನಿಲ್ಲಿಸಿ ತಮ್ಮ ಕಾರನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಬಿಟ್ಟು ಕೊಟ್ಟಿದ್ದಾರೆ.
ಗಾಯಗೊಂಡಿದ್ದ ಸವಾರರ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವೆ, ತಮ್ಮ ವಾಹನದ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಮಾಡಿದರು. ಅಲ್ಲದೆ ಕಾರ್ಯಕಾರಿಣಿ ನಡೆಯುವ ಸ್ಥಳಕ್ಕೆ, ಸುಮಾರು 5 ಕಿ. ಮೀ ನಷ್ಟು ದೂರ ಬೈಕಿನ ಮೂಲಕ ತೆರಳಿ ಮಾನವೀಯತೆಯನ್ನು ಮೆರೆದಿದ್ದಾರೆ.
ಅಪಘಾತಕ್ಕೀಡಾದವರಿಗೆ ಸಹಾಯಹಸ್ತವನ್ನು ಚಾಚಿ, ಜನಸಾಮಾನ್ಯರಂತೆ ಬೈಕಿನಲ್ಲಿ ಸಮಾರಂಭದ ಸ್ಥಳಕ್ಕೆ ತೆರಳಿದ ಕೇಂದ್ರ ಸಚಿವರ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.