ಚಾಕೋಲೇಟ್ ಖರೀದಿಸಲು ಅಕ್ರಮವಾಗಿ ಗಡಿದಾಟಿ ಭಾರತಕ್ಕೆ ಬಂದ ಬಾಂಗ್ಲ ಯುವಕನನ್ನು ಬಿಎಸ್‌ಎಫ್ ಬಂಧಿಸಿದೆ.
ಎರಡು ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯನ್ನು ಗುರುತಿಸುವ ಶಾಲ್ದಾ ನದಿಯ ಸಮೀಪವಿರುವ ಬಾಂಗ್ಲಾದೇಶದ ಹಳ್ಳಿಯ ನಿವಾಸಿ ಎಮಾನ್ ಹೊಸೈನ್, ತ್ರಿಪುರಾದ ಸಿಪಾಹಿಜಾಲಾ ಜಿಲ್ಲೆಯಲ್ಲಿ ತಮ್ಮ ನೆಚ್ಚಿನ ಭಾರತೀಯ ಚಾಕೊಲೇಟ್ ಖರೀದಿಸಲು ನದಿಯ ಮೂಲಕ ಈಜುತ್ತಿದ್ದ.
ಭಾರತದ ಕಲಾಂಚೌರಾ ಗ್ರಾಮದ ಅಂಗಡಿಯಿಂದ ಚಾಕೊಲೇಟ್ ಖರೀದಿಸಲು ಮುಳ್ಳುತಂತಿ ಬೇಲಿಯಲ್ಲಿನ ರಂಧ್ರದ ಮೂಲಕ ನುಸುಳುತ್ತಿದ್ದ. ನಂತರ ಅದೇ ರೀತಿಯಲ್ಲಿ ಮನೆಗೆ ಮರಳುತ್ತಿದ್ದ. ಆದರೆ, ಏಪ್ರಿಲ್ 13 ರಂದು ಮತ್ತೆ ಆತ ಚಾಕೋಲೇಟ್ ಖರೀದಿಸಲು ಇದೇ ದಾರಿಯಲ್ಲಿ ಬಂದಾಗ ಬಿಎಸ್‌ಎಫ್ ಆತನನ್ನು ಬಂಧಿಸಿದೆ.
ಹದಿಹರೆಯದ ಯುವಕನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೊಲೀಸರು ಆತನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಬಾಂಗ್ಲಾದೇಶದ ಕೊಮಿಲ್ಲಾ ಜಿಲ್ಲೆಯ ನಿವಾಸಿಯಾಗಿರೋ ಈತ, ತನ್ನ ನೆಚ್ಚಿನ ಚಾಕೊಲೇಟ್ ಖರೀದಿಸಲು ಭಾರತಕ್ಕೆ ನುಸುಳಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತನ ಬಳಿ ಕೇವಲ 100 ಬಾಂಗ್ಲಾದೇಶಿ ಟಾಕಾ ಪತ್ತೆಯಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆಯು ನಡೆಯುತ್ತಿದೆ.