ಸಮಗ್ರ ನ್ಯೂಸ್: ಪತಿ ಇಲ್ಲದೆ ಬದುಕೇ ಇಲ್ಲ ಎಂಬ ನಿರ್ಧಾರಕ್ಕೆ ಬಂದ ಮಹಿಳೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಮುದ್ದಾದ ಮಗುವನ್ನು ಕೊಂದು ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ರಾಯಚೂರಿನಲ್ಲಿ ನಡೆದಿದೆ.
ಮಂಗಳೂರು ನಗರದಲ್ಲಿ ಅಪಘಾತದಲ್ಲಿ ಪತಿ ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಶೃತಿ ಆಘಾತಕ್ಕೊಳಗಾಗಿದ್ದಾಳೆ. ರಾಯಚೂರಿನಲ್ಲಿದ್ದ ಶೃತಿ ತನ್ನ 6 ತಿಂಗಳ ಮಗುವನ್ನು ನೇಣುಹಾಕಿ ಹತ್ಯೆಗೈದು ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ.
ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ (36), ರಾಯಚೂರಿನಲ್ಲಿದ್ದ ಪತ್ನಿ ಶೃತಿ (30), ಆರು ತಿಂಗಳ ಶಿಶು ಅಭಿರಾಮ ಮೃತಪಟ್ಟ ದುರ್ದೈವಿಗಳು
ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ ಅವರು ಕುಂಟಿಕಾನ ಬಳಿ ಶನಿವಾರ ರಾತ್ರಿ 8.50 ಸುಮಾರಿಗೆ ರಸ್ತೆ ದಾಟುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ಕುಂದಾಪುರಕ್ಕೆ ಸಂಚರಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದಾದ ನಂತರ ರಾಯಚೂರಿನಲ್ಲಿದ್ದ ಅವರ ಪತ್ನಿಗೆ ಈ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದಾರೆ.
ಗಂಡನ ಅಗಲಿಕೆಯ ಸುದ್ದಿ ಅರಗಿಸಿಕೊಳ್ಳಲಾಗದೆ ರಾತ್ರಿ 10 ಗಂಟೆ ಸುಮಾರಿಗೆ ತಮ್ಮ 6 ತಿಂಗಳ ಮಗು ಅಭಿರಾಮನನ್ನು ಕೊಂದು ತಾವೂ ಆತ್ಮಹತ್ಯೆಗೆ ಶರಣಾಗಿದ್ದು, ಇಡೀ ಕುಟುಂಬವೇ ದುರಂತದಲ್ಲಿ ಅಂತ್ಯಗೊಂಡಿದೆ.
ಅಪಘಾತದ ಬಗ್ಗೆ ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ, ಇತ್ತ ಲಿಂಗಸೂಗೂರು ಪೊಲೀಸರು ಕಮ್ಮಾರ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗಂಗಾಧರ ಹಾಗೂ ಶೃತಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 6 ತಿಂಗಳ ಮಗುವನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿರೋದು ದೊಡ್ಡ ದುರಂತವೇ ಸರಿ.