ಸಮಗ್ರ ನ್ಯೂಸ್ : ಕೆಎಸ್ ಆರ್ ಟಿಸಿ-ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.
ಬೋಳೂರು ಜಾರಂದಾಯ ದೈವಸ್ಥಾನ ಬಳಿಯ ನಿವಾದಿ ದಿ. ನಾರಾಯಣ ಎಂಬವರ ಪುತ್ರ ರಾಜೇಶ್ ಬೋಳೂರು(50) ಮೃತರು. ಕಿನ್ಯಾ ಸಮೀಪದ ಆಕ್ಸಿ ಬ್ಲ್ಯೂ ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭ ಚೆಂಬುಗುಡ್ಡೆ ಸಮೀಪ ಅಪಘಾತಕ್ಕೀಡಾಗಿದ್ದರು.
ಎ.3ರಂದು ಇವರಿದ್ದ ಬೈಕಿಗೆ ಮುಡಿಪುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸು ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಸ್ಥಳೀಯರ ಮಾಹಿತಿಯಂತೆ ಅಪಘಾತಕ್ಕೆ ಕಾರಣವಾಗಿದ್ದ ಕೆಎಸ್ ಆರ್ ಟಿಸಿ ಬಸ್ಸನ್ನು ಬಳಿಕ ಪತ್ತೆಹಚ್ಚಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್ ಅವರನ್ನು ಯೆನೆಪೋಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಜೇಶ್ ವಿವಾಹಿತರಾಗಿದ್ದು ತಾಯಿ, ಪತ್ನಿ ಹಾಗೂ ಎಳೆಯ ಹರೆಯದ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಹಿಂದೆ ವಿದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್, ವರ್ಷದ ಹಿಂದೆ ಊರಿಗೆ ವಾಪಸ್ಸಾಗಿ ಎರಡು ತಿಂಗಳುಗಳ ಹಿಂದೆಯಷ್ಟೇ ಕಿನ್ಯಾ ಖಾಸಗಿ ಕಂಪೆನಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ನಾಗುರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.