ಸಮಗ್ರ ನ್ಯೂಸ್: ಕೇರಳದ ಪಾಲಕ್ಕಾಡ್ನಲ್ಲಿ ಶುಕ್ರವಾರ(ಎ.15) ಎಸ್ಡಿಪಿಐ ಮತ್ತು ಶನಿವಾರ(ಎ.16)ಆರ್ಎಸ್ಎಸ್ ಕಾರ್ಯಕರ್ತನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಒಂದೇ ದಿನದಲ್ಲಿ ಈ ಘಟನೆ ನಡೆದಿದ್ದು, ಪಾಲಕ್ಕಾಡ್ ನಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಇಂದು (ಎ.16) ಕೊಲೆಯಾದ ವ್ಯಕ್ತಿಯನ್ನು ಆರ್ಎಸ್ಎಸ್ ಮುಖಂಡ ಶ್ರೀನಿವಾಸನ್ ಎಂದು ಗುರುತಿಸಲಾಗಿದೆ.
3 ಬೈಕ್ನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ(ಎ.15) ಪಾಲಕ್ಕಾಡ್ನಲ್ಲಿ ಎಸ್ಡಿಪಿಐ ಮುಖಂಡ ಝುಭೈರ್ ಎಂಬಾತನ ಹತ್ಯೆ ನಡೆದಿತ್ತು. ಕಾರಿನಲ್ಲಿ ಬಂದ ತಂಡವೊಂದು ಅವರನ್ನು ಹತ್ಯೆಗೈದಿದ್ದು ಮಧ್ಯಾಹ್ನ 1:30 ಸುಮಾರಿಗೆ ಕೃತ್ಯ ನಡೆದಿದೆ.
ಶುಕ್ರವಾರದಂದು ಮಸೀದಿಯಲ್ಲಿ ಜುಮಾ ನಮಾಝ್ ನಿರ್ವಹಿಸಿ ತಮ್ಮ ತಂದೆಯೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಎಲಪ್ಪುಳ್ಳಿ ಚರ್ಚ್ ಸಮೀಪ ಎರಡು ಕಾರುಗಳಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡವು ಢಿಕ್ಕಿ ಹೊಡೆದು ಕೊಲೆಗೈದಿದೆ. ಈ ವೇಳೆ ಜೊತೆಯಲ್ಲಿದ್ದ ತಂದೆ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಝುಬೈರ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಾಲಕ್ಕಾಡ್ ನ ಮಾಜಿ ವಿಭಾಗ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಎಸ್ಡಿಪಿಐ ಎಲಪ್ಪುಳ್ಳಿ ಪಂಚಾಯತ್ ಸಮಿತಿ ಸದಸ್ಯರೂ ಆಗಿದ್ದಾರೆ.
ಕೊಲೆಯ ಹಿಂದೆ ರಾಜಕೀಯ ಆಯಾಮವಿದೆಯೇ ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಈ ಕೊಲೆಯ ಹಿಂದೆ ಆರೆಸ್ಸೆಸ್ ಕೈವಾಡವಿದೆ ಎಂದು ಎಸ್ಡಿಪಿಐ ಆರೋಪಿಸಿತ್ತು.
ಶನಿವಾರ ಇದೇ ರೀತಿಯ ಕೃತ್ಯ ನಡೆದಿದ್ದು, ಶ್ರೀನಿವಾಸನ್ ಬೀದಿ ಹೆಣವಾಗಿದ್ದಾನೆ. ಘಟನೆಗೆ ಎಸ್ಡಿಪಿಐ ಕಾರಣ ಎಂದು ಆರೋಪಿಸಲಾಗಿದೆ.