ಸಮಗ್ರ ನ್ಯೂಸ್: ಬಾಲಕನೊಬ್ಬ ತನ್ನ ತಂದೆಯ ರಸ್ತೆ ಬದಿ ವ್ಯಾಪಾರಕ್ಕೆ ಬೆಂಬಲಿಸುವಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಮಾಡಿ ಬಳಿಕ ಅಂಗಡಿ ಮುಂದೆ ಗ್ರಾಹಕರು ಕ್ಯೂ ನಿಂತಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಇದು ತಂದೆಯ ವ್ಯಾಪಾರಕ್ಕೆ ಉತ್ತಮ ಗ್ರಾಹಕರನ್ನು ಸೆಳೆಯಲು ಕಾರಣವಾಗಿದೆ.
ಹೈದರಾಬಾದಿನ ಮೋತಿ ನಗರದಲ್ಲಿ ಹಲೀಮ್ ಸ್ಟಾಲ್ ಇಟ್ಟುಕೊಂಡಿರುವ ವರ್ತಕರೊಬ್ಬರ ಮಗ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ದಲ್ಲಿ ತನ್ನ ತಂದೆಯ ವ್ಯಾಪಾರವನ್ನು ವಿವರಿಸಿ, ಬೆಂಬಲಿಸುವಂತೆ ಜಾಹಿರಾತು ಮಾಡಿದ್ದಾನೆ. ಬಾಲಕನ ಈ ವಿಡಿಯೋ ಹೈದರಬಾದ್ ನಿವಾಸಿಗಳ ನಡುವೆ ವೈರಲ್ ಆಗಿದ್ದು, ಸ್ಥಳೀಯರು ಮತ್ತು ಇನ್ನಿತರರು ಬಾಲಕನ ತಂದೆಯ ಹಲೀಮ್ ಸ್ಟಾಲ್ ಗೆ ಭಾರೀ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.
ತಂದೆಯನ್ನೂ, ತಂದೆ ನಡೆಸುವ ಹಲೀಮ್ ಸ್ಟಾಲನ್ನು ಮೊದಲಿಗೆ ಪರಿಚಯಿಸುವ ಬಾಲಕ, ಸ್ಟಾಲಿನಲ್ಲಿ ಲಭ್ಯವಿರುವ ವಿವಿಧ ಭಕ್ಷ್ಯಗಳನ್ನು ಪರಿಚಯಿಸುವುದು ವಿಡಿಯೋದಲ್ಲಿ ಕಂಡು ಬರುತ್ತದೆ.
ಬಾಲಕನನ್ನು ಮಹಮ್ಮದ್ ಅದ್ನಾನ್ ಎಂದು ಗುರುತಿಸಲಾಗಿದ್ದು, ಆತನ ತಂದೆ ಕಳೆದ ನಾಲ್ಕು ವರ್ಷಗಳಿಂದ ಈ ವ್ಯಾಪಾರವನ್ನು ಮಾಡುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.
ಬಾಲಕ ತನ್ನ ತಂದೆಯ ಸ್ಟಾಲ್ ಅನ್ನು ವಿವರಿಸುವ ಶೈಲಿಗೆ ಮಾರು ಹೋಗಿರುವ ಜನರು, ಸ್ಟಾಲ್ ನ ಗ್ರಾಹಕರಾಗುತ್ತಿದ್ದಾರೆ, ಸ್ಥಳೀಯ ಸಮಾಜ ಸೇವಕ ಅಝರ್ ಮಕ್ಸೂಸಿ ಬಾಲಕನ ವಿಡಿಯೋವನ್ನು ಹಂಚಿಕೊಂಡಿದ್ದು, ʼತಂದೆಗೆ ಆಧಾರಸ್ಥಂಭವಾಗುವುದು ಎಂದು ಇದಕ್ಕೆ ಹೇಳುತ್ತಾರೆʼ ಎಂದು ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ, ಹಲವು ಫುಡ್ ವ್ಲಾಗರ್ ಗಳು ಅದ್ನಾನ್ ತಂದೆಯ ಸ್ಟಾಲ್ ಗೆ ಭೇಟಿ ನೀಡಿ ಪ್ರೋತ್ಸಾಹ ನೀಡಿದ್ದಾರೆ, ಇದೀಗ ಆತನ ತಂದೆಯ ʼಅಲ್ ಹಂದುಲಿಲ್ಲಾ ಚಿಕನ್ ಹಲೀಮ್ʼ ಸ್ಟಾಲ್ ಸ್ಥಳೀಯರ ಮೆಚ್ಚುಗೆ ಪಡೆದಿದೆ, ವ್ಯಾಪಾರವನ್ನೂ ಹಿಗ್ಗಿಸಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.