Ad Widget .

ಹೈಕಮಾಂಡ್ ಸೂಚನೆಗೆ ಡೋಂಟ್ ಕೇರ್| ನಾ ರಾಜೀನಾಮೆ ಕೊಡಲ್ಲ ಎಂದ ಈಶ್ವರಪ್ಪ| ಮಂಕಾದ ಪ್ರತಿಪಕ್ಷಗಳ ಅಬ್ಬರದ ಹೋರಾಟ

ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ್ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂಬ ಕೆ.ಎಸ್.ಈಶ್ವರಪ್ಪ ಅವರ ಅಚಲ ನಿಲುವು ಆಡಳಿತಾರೂಢ ಬಿಜೆಪಿ ನಾಯಕರನ್ನು ಚಂಚಲ ಮನಸ್ಥಿತಿಗೆ ದೂಡಿದೆ. ಬುಧವಾರ ಈಶ್ವರಪ್ಪ ರಾಜೀನಾಮೆ ನೀಡಬಹುದೆಂಬ ವಾತಾವರಣ ಇತ್ತಾದರೂ ಪ್ರಬಲ ನಾಯಕರೊಬ್ಬರ ಸೂಚನೆ ಈಶ್ವರಪ್ಪನವರನ್ನು ರಕ್ಷಿಸಿದೆ.

Ad Widget . Ad Widget . Ad Widget . Ad Widget .

ಪಕ್ಷದೊಳಗೆ ರಾಜೀನಾಮೆ ಅಭಿಪ್ರಾಯದ ಬೆನ್ನಲ್ಲೇ ರಾಜಿ ಕೂಗು ಸಹ ಪ್ರತಿಧ್ವನಿಸಿತು. ಈ ನಡುವೆ, ಪ್ರತಿಪಕ್ಷಗಳ ಹೋರಾಟದಿಂದ ರಾಜ್ಯದ ಜನರಿಗೆ ತಪ್ಪು ಸಂದೇಶ ರವಾನೆಯಾಗುವುದನ್ನು ತಡೆಯಲು ಘಟನೆ ನಡೆದ 24 ತಾಸುಗಳ ಬಳಿಕ ಕಮಲಪಡೆ ಮೈಕೊಡವಿಕೊಂಡು ಮೇಲೆದ್ದಿದೆ.

Ad Widget . Ad Widget .

ಶೇ.40ರ ಕಮಿಷನ್ ಬೇಡಿಕೆ ಗುತ್ತಿಗೆದಾರನನ್ನು ಬಲಿಪಡೆದಿದೆ ಎಂದು ಆರೋಪಿಸಿ, ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದು ಪ್ರತಿಪಕ್ಷಗಳಾದ ಕಾಂಗ್ರೆಸ್, ಆಮ್​ದಿಮಾರ್ಟಿ ಬುಧವಾರ ಬೀದಿಗೆ ಇಳಿದವು. ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದರೆ, ಸಿಎಂ ಗೃಹ ಕಚೇರಿ ಬಳಿ ಯುವ ಕಾಂಗ್ರೆಸ್ ಕಪ್ಪು ಬಾವುಟ ಪ್ರದರ್ಶಿಸಿತು. ಆಪ್ ಮುಖಂಡರು ಮುತ್ತಿಗೆ ಹಾಕುವ ಯತ್ನ ನಡೆಸಿದರು.

ಹಿಜಾಬ್, ಭಗವದ್ಗೀತೆ, ಆಜಾನ್ ವಿಚಾರದಲ್ಲಿ ಹಿನ್ನಡೆ ಅನುಭವಿಸಿ ಮಂಕಾಗಿದ್ದ ಕೈ ಪಾಳಯ ಇದೀಗ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಬಳಸಿಕೊಂಡು ಪುಟಿದೆದ್ದಿದೆ. ಬಿಜೆಪಿಯನ್ನು ಕಳಂಕಿತ ಸ್ಥಾನದಲ್ಲಿ ನಿಲ್ಲಿಸುವ ಕಾರ್ಯತಂತ್ರ ಹೆಣೆದಿದೆ. ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲ ಸಮಕ್ಷಮದಲ್ಲಿ ಕ್ಷಿಪ್ರ ಕಾರ್ಯಾಚರಣೆ ನೀಲಿನಕ್ಷೆ ಸಿದ್ಧಪಡಿಸಿದೆ.

ಇದರ ಭಾಗವಾಗಿ ಬೆಳಗಾವಿಗೆ ದಿಢೀರ್ ತೆರಳಿ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಗುರುವಾರದಿಂದ ಐದು ದಿನಗಳ ಕಾಲ ಎಲ್ಲ ಜಿಲ್ಲೆಗಳಲ್ಲಿ ಚಳವಳಿಗೆ ತೀರ್ಮಾನಿಸಿದ್ದು, ರಾಜ್ಯ ನಾಯಕರ ನೇತೃತ್ವದಲ್ಲಿ ರಚಿತ ತಂಡಗಳು ಅಖಾಡಕ್ಕೆ ಧುಮುಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹವಣಿಸಿವೆ.

ಪಕ್ಷದ ರಾಜ್ಯಾಧ್ಯಕ್ಷರಿಗೆ ಈಶ್ವರಪ್ಪ ಪ್ರಕರಣದ ಪೂರ್ಣ ಮಾಹಿತಿ ನೀಡಿದ್ದರು. ನಂತರ ಪಕ್ಷಕ್ಕೆ ಮುಜುಗರ ತರಲಾರೆ, ಸಿಎಂ ಬಯಸಿದರೆ ರಾಜೀನಾಮೆ ನೀಡುವೆ ಎಂದಿದ್ದ ಈಶ್ವರಪ್ಪ, ಬಹುತೇಕ ಅದೇ ಮನಸ್ಥಿತಿಯಲ್ಲಿದ್ದರು. ಸಿಎಂ ಭೇಟಿ ಮಾಡಿ ಅಂತಿಮ ನಿರ್ಧಾರ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದ ಅವರು ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳಿದ ನಂತರ ರಾಗ ಬದಲಿಸಿದರು. ಮುಂದಿನ ನಡೆ ಕುರಿತು ವರಿಷ್ಠರ ಆಲೋಚನೆ ಜಾಡು ಹಿಡಿದ ಪ್ರಭಾವಿಯೊಬ್ಬರು ನೀಡಿದ ಅಭಯವೇ ಈಶ್ವರಪ್ಪ ಅವರಿಗೆ ಧೈರ್ಯ ತುಂಬಿದೆ. ಶಿವಮೊಗ್ಗದಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಾಗ ಅವರ ಧ್ವನಿಯಲ್ಲಿ ಆತ್ಮವಿಶ್ವಾಸ ಎದ್ದುಕಾಣಿಸಿತ್ತಲ್ಲದೆ, ಏನೇ ಬಂದರೂ ಎದುರಿಸುವೆ ಎಂಬ ದೃಢತೆ ಅವರ ಹಾವಭಾವದಿಂದ ಬಿಂಬಿತವಾಗಿದೆ.

Leave a Comment

Your email address will not be published. Required fields are marked *