ಸಮಗ್ರ ನ್ಯೂಸ್: ಅಡಿಕೆ ಮಾರುಕಟ್ಟೆಯಲ್ಲಿ ಸಮನ್ವಯ ಸಾಧಿಸಲು ಜಿಎಸ್‌ಟಿ ದರವನ್ನು ಶೇ 5ರಿಂದ ಶೇ 2ಕ್ಕೆ ಇಳಿಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್‌ಕುಮಾರ್ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ ಅವರು, ‘ಸಹಕಾರ ಸಂಸ್ಥೆಗಳು ಶೇ 100ರಷ್ಟು ತೆರಿಗೆಯನ್ನು ಪಾವತಿಸುತ್ತವೆ. ಇಡೀ ಅಡಿಕೆ ಮಾರುಕಟ್ಟೆಯಲ್ಲಿ ನಮ್ಮ ಪಾಲು ಶೇ15ರಷ್ಟು ಇರುವುದರಿಂದ ಸಹಕಾರಿ ಸಂಘಗಳು ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಎಸ್‌ಟಿ ಇಳಿಕೆ ಮಾಡಬೇಕು’ ಎಂದು ವಿನಂತಿಸಿದರು.
ಬಾಕಿ ಇರುವ ಕೆಲಸಕ್ಕೆ ಆರ್ಥಿಕ ನೆರವಿನ ಅಗತ್ಯ ಇದ್ದು, ₹5 ಕೋಟಿ ಮಂಜೂರು ಮಾಡಬೇಕು. ಅಡಿಕೆ ಹಳದಿ ರೋಗದಿಂದ ತೋಟ ನಾಶವಾಗಿರುವ ಸುಳ್ಯ, ಕೊಪ್ಪ ಮಡಿಕೇರಿ ಭಾಗದ ಬೆಳೆಗಾರರು ಸಹಕಾರಿ ಸಂಘಗಳಿಂದ ಪಡೆದ ಸಾಲ ಮನ್ನಾ ಮಾಡಿ, ಹೊಸ ಕೃಷಿ ಮಾಡಲು ಆರ್ಥಿಕ ಸಹಾಯ ನೀಡಬೇಕು. ಅಡಿಕೆ ಕೃಷಿಯಲ್ಲಿ ಕಾರ್ಮಿಕರ ಕೊರತೆಯಿದ್ದು, ಹೊಸತಾಗಿ ಮಾರುಕಟ್ಟೆಗೆ ಬಂದಿರುವ ಕಾರ್ಬನ್ ಫೈಬರ್ ದೋಟಿಯ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿಪತ್ರದಲ್ಲಿ ವಿನಂತಿಸಲಾಗಿದೆ.
ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಕೃಷ್ಣಕುಮಾರ್, ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಇದ್ದರು.