Ad Widget .

ಮಗುವನ್ನೂ ಚಿವುಟಿ ತೊಟ್ಟಿಲು ತೂಗುತ್ತಿರುವ ರಾಜಕೀಯ ನಾಯಕರು| ವಿಕೋಪಕ್ಕೆ ತಿರುಗಿದ ಮೇಲೆ ಹಿಂದೂ – ಮುಸ್ಲಿಂ ಭಾಯಿಭಾಯಿ ಮಂತ್ರ!

Ad Widget . Ad Widget .

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸೃಷ್ಟಿಯಾದ ಕೋಮುವೈಷಮ್ಯ ವಿಕೋಪಕ್ಕೆ ತಿರುಗುತ್ತಿದ್ದು, ಇದೀಗ ರಾಜಕೀಯ ನಾಯಕರು ಶಾಂತಿಮಂತ್ರ ಜಪಿಸುತ್ತಿದ್ದಾರೆ. ತಾವೇ ಸೃಷ್ಟಿ ಮಾಡಿದ ಈ ಕೋಮುದ್ವೇಷವನ್ನು ಅತ್ತ ಆರಲೂ ಬಿಡದೆ ಇತ್ತ ಜೋರಾಗಲೂ ಬಿಡದೆ ಮಗುವನ್ನೂ ಚಿವುಟುತ್ತಾ ತೊಟ್ಟಿಲು ತೂಗುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

Ad Widget . Ad Widget .

ಉಡುಪಿಯ ಸರ್ಕಾರಿ ಕಾಲೇಜೊಂದರಲ್ಲಿ ಹಿಜಾಬ್ ವಿವಾದ ಸೃಷ್ಟಿಯಾದ ಬಳಿಕ ಈ ವಿಚಾರ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೇ ವಿಚಾರ ವಿದ್ಯಾರ್ಥಿಗಳ ಮಧ್ಯೆ, ಧರ್ಮಗಳ ಮಧ್ಯೆ ದ್ವೇಷ ಉಂಟಾಗುವಂತೆ ಮಾಡಿತ್ತು. ಮೇಲ್ನೋಟಕ್ಕೆ ಇದು ವಿದ್ಯಾರ್ಥಿಗಳು ಸೃಷ್ಟಿಸಿಕೊಂಡ ಕಲಹ ಎಂದು ಕಂಡರೂ ಇದರ ಹಿಂದೆ ಹಲವು ಕಾಣದ ಕೈಗಳ ಕೈವಾಡ ಇದ್ದಿದ್ದು ಸುಳ್ಳಲ್ಲ.

ಈ ವಿವಾದವನ್ನು ಬಗೆಹರಿಸುವ ಪ್ರಯತ್ನ ಮಾಡದೆ ಅದೇ ಬೆಂಕಿಗೆ ತುಪ್ಪ ಸುರಿಯುತ್ತಾ ಚಳಿ ಕಾಯಿಸಿಕೊಂಡವರು ನಮ್ಮ ರಾಜಕೀಯ ನಾಯಕರು. ಇತ್ತ ಹಿಜಾಬ್ ನ ಪರ ವಿರೋಧ ಚರ್ಚೆಯ ಬೆನ್ನಲ್ಲೇ ಹಲವು ಮುಸ್ಲಿಂ ಸಂಘಟನೆಗಳು ನ್ಯಾಯಾಲಯದ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿ ಬಂದ್ ಗೆ ಕರೆಕೊಟ್ಟರು. ಇದರಿಂದ ಕೇವಲ ಶಿಕ್ಷಣ ಸಂಸ್ಥೆಗಳಲ್ಲಿ ಇದ್ದ ಭಿನ್ನರಾಗ ಇಡೀ ರಾಜ್ಯದಲ್ಲಿ ಹುಟ್ಟಿಕೊಂಡಿತು.

ಇದಾದ ಬಳಿಕ ಧರ್ಮಗಳ ನಡುವೆ ಸಂಘರ್ಷ ತಾರಕಕ್ಕೇರಿತು. ಹಿಜಾಬ್ ಬಳಿಕ ಹಲಾಲ್ ಕಟ್, ಜಟ್ಕಾ ಕಟ್ ಮುಂತಾದ ವಿಚಾರಗಳು ಜನರ ನಡುವೆ ಸಾಮರಸ್ಯದ ಬಿರುಕನ್ನು ಸೃಷ್ಟಿಮಾಡಿದವು. ಇನ್ನು ರಾಜ್ಯದ ಹಲವು ಧಾರ್ಮಿಕ ಕೇಂದ್ರಗಳಲ್ಲಿ ಅನ್ಯಮತೀಯರಿಗೆ ವ್ಯಾಪಾರ ನಿರ್ಬಂಧ ಹೇರಲಾಯಿತು. ಇದರಿಂದ ಏನೂ ಅರಿಯದ ಹಲವು ಮುಗ್ದ ಜೀವಗಳಿಗೆ ತೊಂದರೆಯಾಗಿದ್ದು, ನಿರ್ಬಂಧ ಹೇರಿದ ಹಲವು ಸಂಘಟನೆಗಳ ಪ್ರಮುಖರು ನಿರ್ಬಂಧ ಹೇರಲಾದ ಜನರ ಜೊತೆಗೇ ತಮ್ಮ ಒಳ ವ್ಯವಹಾರಗಳನ್ನು ಮುಗಿಸಿಕೊಂಡರೆ, ರಾಜಕೀಯ ನಾಯಕರ ಮೋಸದಾಟಕ್ಕೆ ಸದ್ಯ ಬಲಿಯಾಗುತ್ತಿರುವುದು ಹಲವು ಅಮಾಯಕ ಜೀವಗಳು.

ವ್ಯಾಪಾರ ನಿರ್ಬಂಧದಿಂದ ಹಲವರ ಆದಾಯಕ್ಕೆ ಕೊಡಲಿ ಏಟು ಬಿದ್ದಿದೆ. ಹಲವರ ನಡುವೆ ಮತೀಯ ಸಂಘರ್ಷ ‌ನಡೆದಿದೆ. ಇನ್ನು ಕೆಲವೆಡೆ ಹಲ್ಲೆ, ದೊಂಬಿಗಳು ಸೃಷ್ಟಿಯಾಗಿವೆ. ಇನ್ನು ಈ ವಿಚಾರ ತಲೆನೋವಾಗುತ್ತದೆ ಎಂದು ಅರಿವಿಗೆ ಬಂದಾಗ ಹಲವು ವಿವಿಧ ಪಕ್ಷಗಳ ಮುಖಂಡರು ಶಾಂತಿ ಮಂತ್ರ ಜಪಿಸುತ್ತಿದ್ದಾರೆ. ಸರ್ಕಾರ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದೆ. ಇಷ್ಟರವರೆಗೆ ತುಟಿಬಿಚ್ಚದೆ ಕುಳಿತಿದ್ದ ಮಹಾನ್ ರಾಜಕಾರಣಿಗಳು ಇವರೇ ಸೃಷ್ಟಿಮಾಡಿದ ದ್ವಂದ್ವವನ್ನು ವಿರೋಧಿಸುವ ನಾಟಕವಾಡುತ್ತಿದ್ದಾರೆ. ಇದೆಲ್ಲದರ ನಡುವೆ ರಾಜ್ಯದ ಜನರು ಮಾತ್ರ ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಿದ್ದಾರೆ.

ರಾಜ್ಯದಲ್ಲಿ ಸೃಷ್ಟಿಯಾಗಿರುವ ಕೋಮುವಿವಾದ ರಾಜಕೀಯ ನಾಯಕರ ಕೃಪಾಪೋಷಿತ ನಾಟಕವೆಂದೇ ಹೇಳಬಹುದು. ಇದು ಜನರನ್ನು ದಿಕ್ಕು ತಪ್ಪಿಸುವ, ಆ ಮೂಲಕ ತಮ್ಮ ಬೇಳೆ ಬೇಯಿಸುವ ಪ್ರಯತ್ನವಷ್ಟೇ. ಇದಕ್ಕಾಗಿ ಈ ನಾಯಕರು ಅಮಾಯಕ ಜನರ ಪ್ರಾಣ ಬಲಿಕೊಡಲೂ ಹೇಸುವುದಿಲ್ಲ. ಇದರ ಹೆಸರಲ್ಲಿ ಹಲವರು ಬೀದಿ‌ ಹೆಣಗಳಾಗಿದ್ದು ಗೊತ್ತೇ ಇದೆ. ಹೀಗಿರುವಾಗ ಜನರು‌ ಬುದ್ದಿವಂತರಾಗುವುದು ಉತ್ತಮವಲ್ಲವೇ?

Leave a Comment

Your email address will not be published. Required fields are marked *