ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಚಟ್ಟೆ ಕಲ್ಲು ಎಂಬಲ್ಲಿ ಕಳೆದ ಮಾ.20ರಂದು ನಡೆದ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 20ಸಾವಿರ ನಗದು, ಚಿನ್ನಾಭರಣ, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ವಶಪಡಿಸಿಕೊಂಡಿದ್ದಾರೆ.
ಚಟ್ಟೆಕಲ್ಲಿನ ಅಂಬರೀಶ್ ಎಂಬವರ ಮನೆಗೆ ದುಷ್ಕರ್ಮಿಗಳು ಒಳಪ್ರವೇಶಿಸಿ ಮನೆಯಲ್ಲಿದ್ದ ಸುಮಾರು 1,52,000/- ನಗದು ಮತ್ತು ಸುಮಾರು 83 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ದರೋಡೆ ಮಾಡಿದ ಘಟನೆ ನಡೆದಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಕಾರ್ತಿಕ್, ಯಧುಕುಮಾರ್, ದೀಕ್ಷಿತ್ ಕೆ.ಎನ್, ಬಿ. ನರಸಿಂಹನ್ ಎಂಬವರನ್ನು ಬಂಧಿಸಿದ್ದಾರೆ.
ಈ ಪ್ರಕರಣದ ಪತ್ತೆಗೆ ಪೊಲೀಸ್ ಅಧೀಕ್ಷಕ ಸೋನಾವಣೆ ಋಷಿಕೇಶ್ ಭಗವಾನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ರವರ ಸೂಚನೆಯಂತೆ ಮಾನ್ಯ ಪೊಲೀಸ್ ಉಪಾಧೀಕ್ಷಕರಾದ ಕು. ಗಾನಾ.ಪಿ.ಕುಮಾರ್, ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ನೇತ್ರತ್ವದಲ್ಲಿ ವಿವಿಧ ತಂಡಗಳನ್ನು ರಚಿಸಿದ್ದರು.
ಪ್ರಕರಣದಲ್ಲಿ ಉಳಿದ ಆರೋಪಿಗಳಾದ ತಮಿಳುನಾಡು ಮೂಲದ ಸೆಂಥಿಲ್, ಪಾಂಡಿಸಂ ಎಂಬವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಂಗ ಬಂಧನಲ್ಲಿದ್ದ ಆರೋಪಿ ಸೆಂಥಿಲ್ ಎಂಬಾತನನ್ನು ಪೊಲೀಸ್ ಭದ್ರಿಕೆಗೆ ಪಡೆದುಕೊಂಡು ತನಿಖೆ ನಡೆಸಿದ ವೇಳೆ 71.52 ಗ್ರಾಂ ಚಿನ್ನಾಭರಣಗಳು ಮತ್ತು ನಗದು 11590/-ರೂಗಳನ್ನು ಕೃತ್ಯಕ್ಕೆ ಉಪಯೋಗಿಸಿದ KA 03 AB 1883 ಮತ್ತು TN 73F 8445 ವಾಹನ ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ತನಿಖೆ ಮುಂದುವರೆದಿದ್ದು ಉಳಿದ ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ.