ಸಮಗ್ರ ನ್ಯೂಸ್: ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಾ ಇರುವಾಗಲೇ ನಗರದ ಬೈಯಪ್ಪನಹಳ್ಳಿ ಜಿಮ್‌ನಲ್ಲಿ ಯುವತಿ ಕುಸಿದು ಬಿದ್ದು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಕಾರಣವು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಿದೆ.
ಮಂಗಳೂರು ಮೂಲದ ವಿನಯಾ ಕುಮಾರಿ (35) ಜಿಮ್‌ನಲ್ಲಿ ಮೃತಪಟ್ಟಿದ್ದರು. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿ ಸಾವನ್ನಪ್ಪಿದ್ದ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮಾರ್ಚ್ 26 ರಂದು ಘಟನೆ ನಡೆದಿತ್ತು. ಜಿಮ್ ವರ್ಕ್ ಔಟ್ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದ ವಿನಯಾ, ಅವರು ಜಿಮ್‌ನಲ್ಲಿ ಕುಸಿದು ಬೀಳುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಕೂಡ ರೆಕಾರ್ಡ್ ಆಗಿತ್ತು.
ಮರಣೋತ್ತರ ಪರೀಕ್ಷೆಯ ವರದಿ ಲಭ್ಯವಾಗಿದ್ದು, ಸಿವಿ ರಾಮನ್ ಆಸ್ಪತ್ರೆ ವೈದ್ಯರು ಪೋಸ್ಟ್ ಮಾರ್ಟಂ ವರದಿ ನೀಡಿದ್ದಾರೆ. ವರದಿಯಂತೆ, ಕೋಮಾದ ಪರಿಣಾಮವಾಗಿ ಸಾವು ಸಂಭವಿಸಿದೆ. ಮೆದುಳಿನ ರಕ್ತನಾಳದ ಛಿದ್ರಗೊಂಡ ಪರಿಣಾಮವಾಗಿ ಸೆರೆಬ್ರಲ್ ಹೆಮರೇಜ್ ಆಗಿದೆ. ಅದರಿಂದ ಯುವತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿರುವಾಗ ಸಾವನ್ನಪ್ಪುವ ಬಗ್ಗೆ ಹಲವು ಅಭಿಪ್ರಾಯಗಳು ಜನರಲ್ಲಿ ಇವೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೂಡ ಜಿಮ್ಗೆ ತೆರಳಿದ್ದ ವೇಳೆ ಮೃತಪಟ್ಟಿದ್ದರು. ಆಗಲೂ ಅತಿಯಾದ ವರ್ಕ್ ಔಟ್ ಮಾಡುವ ಬಗ್ಗೆ ಹಲವು ಮಾಹಿತಿಗಳು, ಪ್ರಶ್ನೆಗಳು ಜನರ ಮನಸಲ್ಲಿ ಮೂಡಿತ್ತು. ಈ ಘಟನೆಯೂ ಅದಕ್ಕೆ ಪೂರಕ ಎಂಬಂತೆ ನಡೆದಿತ್ತು.
ಮಾರ್ಚ್ 26 ರಂದು ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ಜಿಮ್‌ನಲ್ಲಿ ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪೂರ್ವ ವಿಭಾಗ ಡಿಸಿಪಿ ಡಾ. ಭೀಮಾಶಂಕರ್ ಗುಳೇದ ಹೇಳಿಕೆ ನೀಡಿದ್ದಾರೆ. ಯುವತಿ ಜಿಮ್‌ನಲ್ಲಿ ವರ್ಕ್ ಔಟ್ ಮಾಡುವ ವೇಳೆ ಭಾರವಾದ ವಸ್ತುವನ್ನು ಲಿಫ್ಟ್ ಮಾಡಿದ್ದಾರೆ. ಈ ವೇಳೆ ರಕ್ತದ ಒತ್ತಡ ಉಂಟಾಗಿ ಮೆದುಳಿನಲ್ಲಿ ಬ್ಲಡ್ ಪ್ರೆಶರ್ ಉಂಟಾಗಿದೆ. ಮೆದುಳಿನಲ್ಲಿ ಒತ್ತಡದಿಂದ ರಕ್ತನಾಳಗಳು ಒಡೆದು, ರಕ್ತಸ್ರಾವವಾಗಿ ಕೋಮಾಗೆ ಹೋಗಿದ್ದಾರೆ. ಬಳಿಕ ಯುವತಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ.