ಸಮಗ್ರ ನ್ಯೂಸ್: ಹಲಾಲ್ ಅಥವಾ ಜಟ್ಕಾ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕುತಂತ್ರ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಭಾನುವಾರ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಿಟ್ಟೆಯಲ್ಲಿ ಎಂಆರ್‌ಎಫ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವರು, ‘ಹಲಾಲ್ ಹಾಗೂ ಜಟ್ಕಾ ವಿವಾದ ಸೃಷ್ಟಿಸಿರುವುದು ಕೆಲವು ವ್ಯಕ್ತಿಗಳು ಹಾಗೂ ಪಕ್ಷಗಳು. ಯಾರು ಯಾವ ಪದ್ಧತಿಯನ್ನು ಅನುಸರಿಸುತ್ತಿದ್ದಾರೋ ಅದನ್ನೇ ಮುಂದುವಸಿಕೊಂಡು ಹೋಗಲಿ’ ಎಂದು ಹೇಳಿದರು.
‘ಹಲಾಲ್ ಹಾಗೂ ಜಟ್ಕಾ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಚುನಾವಣೆಯಲ್ಲಿ ತೊಡೆ ತಟ್ಟಿ, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗೋಣ’ ಎಂದು ಈಶ್ವರಪ್ಪ ಸವಾಲು ಹಾಕಿದರು.
ಉಡುಪಿಯಲ್ಲಿ 6 ವಿದ್ಯಾರ್ಥಿನಿಯರು ಹಿಜಾಬ್ ಗೊಂದಲ ಹುಟ್ಟು ಹಾಕಿದಾಗಲೇ ಸಮವಸ್ತ್ರ ಮಾತ್ರ ಧರಿಸಿ ಕಾಲೇಜಿಗೆ ಹೋಗುವಂತೆ ಬುದ್ಧಿ ಹೇಳಿದ್ದರೆ ಇಡೀ ರಾಜ್ಯ ಹಾಗೂ ದೇಶ ತಣ್ಣಗೆ ಇರುತ್ತಿತ್ತು. ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ ಕಾಂಗ್ರೆಸ್ ನಾಯಕರು ಖಂಡಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ನಿರ್ನಾಮವಾಗಿರುವ ಕಾಂಗ್ರೆಸ್ ಪಕ್ಷ ಹಿಜಾಬ್, ರಾಷ್ಟ್ರಧ್ವಜ, ಹಲಾಲ್ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಮುಸ್ಲಿಮರನ್ನು ತೃಪ್ತಿಪಡಿಸುವ ಪ್ರಯತ್ನ ಒಳ್ಳೆಯದಲ್ಲ. ಬಿಜೆಪಿ ಹಿಂದುತ್ವದ ಪರವಾಗಿದ್ದರೂ ಮುಸ್ಲಿಮರ ವಿರೋಧಿಯಲ್ಲ. ರಾಷ್ಟ್ರಭಕ್ತ ಮುಸ್ಲಿಮರಿಗೆ ಗೌರವ ಕೊಡುತ್ತೇವೆ. ಆದರೆ, ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದರು.
ಹರ್ಷ ಕೊಲೆ ಪ್ರಕರಣದಲ್ಲಿ ಎನ್‌ಐಎ ತನಿಖೆ ಆರಂಭವಾಗಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಈಶ್ವರಪ್ಪ ಹೇಳಿದರು.