ಅನಾದಿ ಕಾಲದ ಸನಾತನ ಸಂಸ್ಕೃತಿ ಹೊಂದಿರುವ ಭಾರತ ಹಲವು ಅಚ್ಚರಿಪಡಿಸುವ ಮತ್ತು ವೈಜ್ಙಾನಿಕ ಆಚರಣೆಗಳ ತಳಹದಿ. ಇಲ್ಲಿ ಪ್ರತಿದಿನ ಒಂದೊಂದು ಹಬ್ಬ. ಒಂದೊಂದು ಹಬ್ಬಕ್ಕೂ ಅದರದ್ದೇ ವೈಶಿಷ್ಟತೆ ಮತ್ತು ನಂಬಿಕೆ. ಆಚರಣೆಗಳಲ್ಲೂ ವಿಭಿನ್ನತೆ. ಈ ಕಾರಣದಿಂದಲೇ ಭಾರತ ವಿಭಿನ್ನ ಸಂಸ್ಕೃತಿಯ ತವರು ಎಂದು ಕರೆಸಿಕೊಳ್ಳುತ್ತದೆ.
ಹಿಂದೂ ಹಬ್ಬಗಳಲ್ಲಿ ಎಲ್ಲಕ್ಕಿಂತ ಶ್ರೇಷ್ಠ ಎನಿಸಿಕೊಳ್ಳುವುದು ಯುಗಾದಿ. ಪಕ್ಷಿಗಳಲ್ಲಿ ನವಿಲಿನಂತೆ, ಪ್ರಾಣಿಗಳಲ್ಲಿ ಮಾನವನಂತೆ, ಋತುಗಳಲ್ಲಿ ವಸಂತ ನಂತೆ ಹಬ್ಬಗಳಲ್ಲಿ “ಯುಗಾದಿ” ಮೊದಲಿಗ. ಹಿಂದುಗಳ ದೃಷ್ಟಿಯಲ್ಲಿ ಇದು ಹೊಸ ವರ್ಷಾರಂಭ.
ಸಂಸ್ಕೃತದ ಎರಡು ಶಬ್ಧಗಳಾದ ‘ಯುಗ ಮತ್ತು ‘ಆದಿಯಿಂದ ಸೃಷ್ಟಿಗೊಂಡ ಯುಗಾದಿ ಭಾರತೀಯರ ಬಾಯಲ್ಲಿ ಯುಗಾದಿ, ಉಗಾದಿ ಮೊದಲಾಗಿ ಕರೆಸಿಕೊಂಡಿದೆ. ಯುಗಾದಿ ಎಂದರೆ ಸೃಷ್ಟಿಯ ಆರಂಭ. ಈ ಹಬ್ಬ ಐತಿಹಾಸಿಕ ಹಾಗೂ ಪೌರಾಣಿಕ ವಿಶೇಷತೆಗಳನ್ನು ಹೊಂದಿದೆ. ಪೌರಾಣಿಕ ನಂಬಿಕೆಯಲ್ಲಿ ಇದು ಬ್ರಹ್ಮದೇವನು ಸೃಷ್ಟಿಯ ಆರಂಭಕ್ಕೆ ಮುನ್ನಡಿ ಬರೆದ ದಿನ. ಈ ದಿನ ಸೃಷ್ಟಿಕರ್ತ ಬ್ರಹ್ಮ ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಪಂಚಾಂಗ, ಕಾಲಗಣನೆ, ನಕ್ಷತ್ರ, ಋತು, ವರ್ಷ ಮೊದಲಾದ ಲೆಕ್ಕಾಚಾರಗಳು ಆರಂಭವಾದವು ಎಂದು ಹೇಳಲಾಗಿದೆ.

ಯುಗಾದಿಯು ಚೈತ್ರಮಾಸದ ಆರಂಭಕ್ಕೆ ನಾಂದಿಯಾಗುತ್ತದೆ. ಹಿಂದೂಗಳ ಆರಾಧ್ಯ ಮೂರ್ತಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಪಟ್ಟಾಭಿಷಿಕ್ತನಾದ ಶುಭದಿನವೂ ಇದುವೇ ಯುಗಾದಿ. ಚೈತ್ರ ಶುದ್ಧ ನವಮಿಯ ಬುಧವಾರ ಶ್ರೀರಾಮಚಂದ್ರನು ಸಿಂಹಾಸನವನ್ನೇರಿದೆ ಎಂದು ರಾಮಾಯಣವು ಹೇಳುತ್ತದೆ. ಮಹಾಭಾರತದ ಉಲ್ಲೇಖದಂತೆ ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿ ಇಂದ್ರನು ವೈಜಯಂತಿ ಮಾಲೆಯನ್ನು ನೀಡಿ ಚಕ್ರಾಧಿಪತ್ಯ ಸ್ಥಾಪಿಸಿದ ದಿನವೂ ಇದೇ ಆಗಿದೆ.

ಐತಿಹಾಸಿಕವಾಗಿಯೂ ಉಗಾದಿಯ ಉಲ್ಲೇಖ ಬಹಳಷ್ಟಿದೆ. ದಕ್ಷಿಣ ಭಾರತವನ್ನಾಳಿದ ಶಾಲಿವಾಹನ ಮಹಾರಾಜನು ಇದೇ ದಿನ ಸಿಂಹಾಸನವನ್ನು ಅಲಂಕರಿಸಿದನೆಂದೂ, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದೂ ಹೇಳಲಾಗಿದೆ. ಇದರಿಂದಲೇ ಮುಂದೆ ಸಂವತ್ಸರಾಧಾರಿತ ದಿನಗಳು ಆರಂಭಗೊಂಡವು. ಮಹಾಋಷಿ, ಜ್ಯೋತಿಷ ಶಾಸ್ತ್ರ ಪಿತಾಮಹ ವರಾಹಮಿಹಿರನು ವರ್ಷಾರಂಭವನ್ನು ಚೈತ್ರಮಾಸವೆಂದು ಹೇಳಿರುವನು. ಶಾಸ್ತçದ ಪ್ರಕಾರ ಯುಗಾದಿ, ವಿಜಯದಶಮಿ, ಬಲಿಪಾಡ್ಯಮಿ, ಅಕ್ಷಯ ತದಿಗೆ ಹಬ್ಬಗಳು ಅತಿ ಪುಣ್ಯ ಕಾಲ ಮತ್ತು, ಪವಿತ್ರವಾದ ದಿನಗಳು ಎಂಬುದಾಗಿ ತಿಳಿಸಲ್ಪಡುತ್ತವೆ. ಮಂಗಳ ಕಾರ್ಯಕ್ಕೆ ಯುಗಾದಿಯೇ ಸೂಕ್ತ ಎಂದು ಭಾರತೀಯ ಪರಂಪರೆ ಸಾರುತ್ತದೆ.
ಭಾರತದಲ್ಲಿ ಯುಗಾದಿಯನ್ನು ಎರಡು ರೀತಿಯಾಗಿ ಆಚರಣೆ ಮಾಡುತ್ತಾರೆ. ಕರ್ನಾಟಕ ಸೇರಿದಂತೆ ಉತ್ತರ ಭಾರತದಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ತಮಿಳುನಾಡು, ಕೇರಳ, ಉತ್ತರ ಭಾರತದ ಕೆಲ ಸ್ಥಳಗಳಲ್ಲಿ ಸೌರಮಾನ ಯುಗಾದಿಯ ಆಚರಣೆ ಇದೆ. ದೇಶದ ವಿವಿಧ ಪ್ರದೇಶಗಳಿಗನುಸಾರ ಯುಗಾದಿ, ಗುಡಿಪಾಡವಾ, ಬೈಸಾಖಿ, ವಿಷು ಹೀಗೆ ವಿವಿಧ ಹೆಸರಿನಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ.
ಯುಗಾದಿ ಪ್ರಕೃತಿಯ ಹೊಸ ಹುಟ್ಟು:
ಯುಗಾದಿ ಕೇವಲ ಹೊಸ ವರ್ಷಾಚರಣೆಯಲ್ಲ. ಅದು ಪ್ರಕೃತಿಯೂ ಹೊಸ ಸೃಷ್ಟಿಗೆ ಮೈದಳೆದು ನಿಲ್ಲುವ ಕಾಲ. ಪ್ರಕೃತಿಯು ಮಾಗಿಯ ಚಳಿಯನ್ನು ಹೊಡೆದೋಡಿಸಿ, ಚಿಗುರಿ ನಿಂತು ಹೊಸ ಸೃಷ್ಟಿಗೆ ಹಾತೊರೆಯುವ ಕಾಲ. ಗಿಡಮರಬಳ್ಳಿ ಹೂ ಬಿಟ್ಟಾಯ್ತು, ನಂದೂ ನಿಂದು ಯಾವಾಗ? ಎಂಬ ಕವಿ ವಾಣಿಯಂತೆ ಪ್ರಕೃತಿ ಮೈಚೆಲ್ಲಿ ನಿಂತು ಸೃಷ್ಟಿಗೆ ಅನುವಾಗುತ್ತದೆ. ಕೋಗಿಲೆ ಕುಹೂ ಎನ್ನುತ್ತದೆ, ಹಕ್ಕಿ ಚಿಲಿಪಿಲಿಗುಟ್ಟುತ್ತದೆ. ಶುಕಪಿಕಗಳು ಹೊಸ ಹುಮ್ಮಸ್ಸಿನಿಂದ ನಲಿಯುತ್ತವೆ. “ವನಸುಮದೊಳೆನ್ನ ಜೀವ ವಿಕಸಿಸುವಂತೆ ಮನವನನುಗೊಳಿಸು” ಎಂದು ಈ ಅದ್ಭುತ ಅನುಭೂತಿಯನ್ನು ಅನುಭವಿಸಬೇಕಿದೆ. ಮಾನವನ ಬದುಕಿನಲ್ಲಿ ಸುಖದುಃಖಗಳು ಸಹಜ, ಅವೆಲ್ಲವುಗಳಿಗೆ ಸ್ವಾಘತ ನೀಡುವಂತೆ ಬೇವು-ಬೆಲ್ಲದ ನವಿರಾದ ಮಿಶ್ರಣದೊಂದಿಗೆ ಎಲ್ಲವನ್ನು ಸಮದೃಷ್ಟಿಯಿಂದ ಸವಿಯುವ ಸಮಯ ಯುಗಾದಿ. ಈ ಸಮ್ಮಿಷ್ರಣವೇ ಜೀವನದ ಆದಿ. ಕೇವಲ ನಲಿವಲ್ಲದೆ, ಬರೀ ನೋವನ್ನು ಅನುಭವಿಸದೇ ಎರಡನ್ನೂ ಸ್ವಾಗತ ನೀಡಿ, ಅತೀಂದ್ರಿಯ ಸುಖಃವನ್ನು ಪಡೆಯಬೇಕಾದುದು ನಮ್ಮ ಕರ್ತವ್ಯವಲ್ಲವೇ?. ಅದೇ ಜೀವನದ ರಹದಾರಿಯಲ್ಲವೇ?.
“ಯುಗ ಯಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಎಂಬ ಕವಿವಾಣಿಯಂತೆ ಮರಳಿ ಬರುವ ಯುಗಾದಿಯ ಜೊತೆಗೆ ನಾವೂ ಹಳೆಯದೆಲ್ಲವನ್ನು ಮರೆತು ಹೊಸ ಜೀವನಕ್ಕೆ ಮರಳಬೇಕಿದೆ. ಅದಕ್ಕೆ ಈ ಯುಗಾದಿ ವರ್ಷ ನಾಂದಿಯಾಗಲಿ.
ಪ್ರಸಾದ್ ಕೋಲ್ಚಾರ್