ಸಮಗ್ರ ನ್ಯೂಸ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ನಿರಂತರವಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ದೇಶಾದ್ಯಂತ ತಮಟೆ, ಗಂಟೆ ಬಾರಿಸಿ ಚಳವಳಿ ನಡೆಸಲಿದೆ. ಕಾಂಗ್ರೆಸ್ ಸಂಸದರು ವಿಜಯ್ ಚೌಕ್‌ನಿಂದ ಸಂಸತ್ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೆಟ್ರೋಲ್ ಮೇಲೆ ೮೪ ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ ೭೮ ಪೈಸೆ ಏರಿಸಿದೆ. ನಿರಂತರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಇಂದು ೧೧ ಗಂಟೆಗೆ ಗಂಟೆ ಬಾರಿಸಿ ಪ್ರತಿಭಟನೆ ನಡೆಸಲಿದೆ. ಅಲ್ಲದೆ ಸಂಸತ್ ಕಲಾಪದಲ್ಲೂ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಇನ್ನೊಂದೆಡೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಶಾಸ್ತ್ರಿ ಭವನದಲ್ಲಿರುವ ಪೆಟ್ರೋಲಿಯಂ ಸಚಿವಾಲಯದ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಜನರ ಕಷ್ಟಗಳಿಗೆ ಕಿವಿಗೊಡದ ಬಿಜೆಪಿ ಗಮನ ಸೆಳೆಯಲು ಗ್ಯಾಸ್ ಸಿಲಿಂಡರ್ ಮತ್ತು ಡ್ರಮ್-ಬೆಲ್ಸ್, ಇತರೆ ವಾದ್ಯಗಳೊಂದಿಗೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.
ರಾಜ್ಯಗಳು ವಿಧಿಸುವ ತೆರಿಗೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಇರುತ್ತದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ೧೦೭.೨೮ ರೂಪಾಯಿ, ಪ್ರತಿ ಲೀಟರ್ ಡೀಸೆಲ್ ದರ ೯೧.೨೫ ರೂಪಾಯಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೧೦೧.೮೧ ರೂಪಾಯಿ, ಪ್ರತಿ ಲೀಟರ್ ಡೀಸೆಲ್ ದರ ೯೩.೦೭ ರೂಪಾಯಿ, ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೧೧೬.೭೨ ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆ ೧೦೦.೯೪ ರೂಪಾಯಿಯಾಗಿದೆ. ಬೆಲೆ ಏರಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಬ್ಯಾರಲ್ ಒಂದಕ್ಕೆ ೧೦೦ ಡಾಲರ್ ಆಗಲಿದೆ. ಆಹಾರದ ಬೆಲೆಗಳಲ್ಲಿ ಶೇಕಡಾ ೨೨ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಬೆಲೆ ಏರಿಕೆಯ ಬಿಸಿಯಿಂದ ಜನರನ್ನು ರಕ್ಷಿಸಬೇಕು ಎಂದು ಮಾರ್ಚ್ ೨೨ರಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದರು.