ಸಮಗ್ರ ನ್ಯೂಸ್: ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಜಿಲ್ಲೆಯ ಅತಿದೊಡ್ಡ ಬಸ್ ನಿಲ್ದಾಣವೆಂಬ ಖ್ಯಾತಿಗೆ ಪಾತ್ರವಾಗಿರುವ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಇನ್ನು ಮುಂದೆ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಹೆಸರಿನಲ್ಲಿ ರಾರಾಜಿಸಲಿದೆ.
ಕೆ.ಎಸ್.ಆರ್.ಟಿ.ಸಿ ಯು ಕೋಟಿ ಚೆನ್ನಯರ ಹೆಸರನ್ನು ಪುತ್ತೂರು ಬಸ್ ನಿಲ್ದಾಣಕ್ಕೆ ಇಡುವ ಸಂಬಂಧ ನಿರ್ಣಯ ಕೈಗೊಂಡಿದ್ದು, ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಬೆಂಬಿಡದ ಪ್ರಯತ್ನದ ಫಲವಾಗಿ ಯೋಜನೆ ಕೈಗೂಡಿದ್ದು, ಬಹುತೇಕ ಮುಂದಿನ ತಿಂಗಳು ನಾಮಕರಣ ಸಮಾರಂಭ ನಡೆಯುವ ಸಾಧ್ಯತೆ ಇದೆ.
ಶಾಸಕ ಮಠಂದೂರು ಈ ವಿಚಾರವನ್ನು ಖಚಿತಪಡಿಸಿದ್ದು, ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಎಂ. ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ಬಸ್ ನಿಲ್ದಾಣಕ್ಕೆ “ಕೋಟಿ ಚೆನ್ನಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಪುತ್ತೂರು’ ಎಂದು ನಾಮಕರಣ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್, ಸಚಿವರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರ ಗಣ್ಯರ ಸಮಕ್ಷಮ ಚಾರಿತ್ರಿಕ ಸಮಾರಂಭ ಶೀಘ್ರ ನಡೆಯಲಿದೆ ಎಂದು ಮಠಂದೂರು ತಿಳಿಸಿದ್ದಾರೆ.