ಸಮಗ್ರ ಸಮಾಚಾರ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಕಳೆದ ಎಂಟು ದಿನಗಳಲ್ಲಿ 7ನೇ ಬಾರಿಗೆ ದರ ಏರಿಕೆ ಮಾಡಿವೆ. ಇದರೊಂದಿಗೆ ಈ ವಾರವೊಂದರಲ್ಲೇ ತೈಲ ದರ ಪ್ರತಿ ಲೀಟರ್‌ಗೆ ₹ 4.80 ರಷ್ಟು ಏರಿಕೆಯಾದಂತಾಗಿದೆ. ದಿನೇದಿನೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದ್ದು, ದೆಹಲಿಯಲ್ಲಿ ಪೆಟ್ರೋಲ್ ದರವನ್ನು 85 ಪೈಸೆ ಏರಿಕೆ ಮಾಡಲಾಗಿದೆ. ಪರಿಷ್ಕರಣೆ ನಂತರ ಒಂದು ಲೀಟರ್ ಪೆಟ್ರೋಲ್ 100.21 ರೂಪಾಯಿ ಆಗಿದೆ. ಡೀಸೆಲ್ ದರವನ್ನು 70 ಪೈಸೆ ಏರಿಕೆ ಮಾಡಲಾಗಿದ್ದು, ಒಂದು ಲೀಟರ್ ಡೀಸೆಲ್ ದರ 91.47 ರೂಪಾಯಿ ಆಗಿದೆ.
ಮುಂಬೈನಲ್ಲಿ ಪೆಟ್ರೋಲ್ 85 ಪೈಸೆ, ಡೀಸೆಲ್ 75 ಪೈಸೆ ಏರಿಕೆ ಮಾಡಲಾಗಿದೆ.ಕ್ರಮವಾಗಿ ಪೆಟ್ರೋಲ್ ದರ 115.04 ರೂ., ಡೀಸೆಲ್ ದರ 99.35 ರೂಪಾಯಿ ಆಗಿದೆ
ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 76 ಪೈಸೆ ಮತ್ತು 67 ಪೈಸೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ದರ 105. 94 ರೂ., ಡೀಸೆಲ್ ದರ 96 ರೂಪಾಯಿ ಇದೆ.
ಕೊಲ್ಕೊತ್ತಾದ ಪೆಟ್ರೋಲ್ 83 ಪೈಸೆ, ಡೀಸೆಲ್ 70 ಪೈಸೆ ಏರಿಕೆಯಾಗಿದ್ದು, ಕ್ರಮವಾಗಿ 109.68 ರೂ., 94.62 ರೂ ಇದೆ.
ಒಂದು ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 5 ರೂ.ನಷ್ಟು ಏರಿಕೆಯಾಗಿದೆ. ಸ್ಥಳೀಯ ಮಾರಾಟ ತೆರಿಗೆ, ಸಾಗಣೆ ವೆಚ್ಚ ಮೊದಲಾದವುಗಳಿಂದ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಬದಲಾವಣೆಯಾಗಿರುತ್ತದೆ.
ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನವೆಂಬರ್ 4 ರಿಂದ ಇಂಧನ ಬೆಲೆಗಳು ಸ್ಥಗಿತಗೊಂಡಿದ್ದವು. ಈ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು USD 30 ರಷ್ಟು ಏರಿಕೆಯಾಗಿದೆ. ಮಾರ್ಚ್ 10 ರಂದು ಮತ ಎಣಿಕೆಯ ನಂತರ ದರ ಪರಿಷ್ಕರಣೆ ನಿರೀಕ್ಷಿಸಲಾಗಿತ್ತು ಆದರೆ ಅದನ್ನು ಒಂದೆರಡು ವಾರಗಳವರೆಗೆ ಮುಂದೂಡಲಾಗಿತ್ತು.