ಸಮಗ್ರ ನ್ಯೂಸ್: ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಮತ್ತು ವಕೀಲ ಜಗದೀಶ್ ನಡುವಿನ ಜಗಳ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
ರಾಜ್ಯ ಅಪರಾಧ ತನಿಖಾ ದಳದ ಅಧೀಕ್ಷಕ ರವಿ ಡಿ. ಚನ್ನಣ್ಣನವರ್ ತಮ್ಮ ಪೋಷಕರು ಮತ್ತು ಸಂಬಂಧಿಕರ ಹೆಸರಿನಲ್ಲಿ ಅಕ್ರಮವಾಗಿ ಕೋಟ್ಯಂತರ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆಂದು ವಕೀಲ ಕೆ.ಎನ್. ಜಗದೀಶ್ ಕುಮಾರ್ ಹೈಕೋರ್ಟ್ ನಲ್ಲಿ ಅರ್ಜಿ ಹೂಡಿದ್ದಾರೆ.
ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಸೇರಿ ಐವರ ವಿರುದ್ಧ ಸರ್ಕಾರದ ಕಾರ್ಯದರ್ಶಿಗೆ ದೂರುಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಸೇರಿ ಐವರ ವಿರುದ್ಧ ಸರ್ಕಾರದ ಕಾರ್ಯದರ್ಶಿಗೆ ದೂರು
ಅವರು ದೂರು ದಾಖಲಿಸಿ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಅಥವಾ ಜಾರಿ ನಿರ್ದೇಶನಾಲಯಕ್ಕೆ (ಇಡಿ)ಗೆ ತನಿಖೆ ನಡೆಸುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಆ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದ್ದು, ಅದರಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಸಿಬಿಐ, ಇಡಿ ಮತ್ತು ರವಿ ಡಿ. ಚನ್ನಣ್ಣನವರ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಅರ್ಜಿಯಲ್ಲಿ ಚನ್ನಣ್ಣನವರ್ ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯ ಮಾಹಿತಿಯನ್ನು ದಾಖಲೆ ಸಹಿತ ನೀಡಲಾಗಿದೆ.
ಏನಿದು ಪ್ರಕರಣ:
ರವಿ ಡಿ. ಚೆನ್ನಣ್ಣನವರ್ ಅವರು 2001ರಲ್ಲಿ ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆ ಉತ್ತೀರ್ಣರಾಗಿದ್ದರು. ನಂತರ ಐಪಿಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. 13 ವರ್ಷಗಳ ಸೇವಾವಧಿಯಲ್ಲಿ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದು, ಅತ್ಯಂತ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಬಿಂಬಿಸಿಕೊಂಡಿದ್ದು, ಅವರನ್ನು ‘ಕರ್ನಾಟಕದ ಸಿಂಗಂ’ ಎಂದು ಕರೆಯುತ್ತಾರೆ. ಆದರೆ, ಅತ್ಯಂತ ಭ್ರಷ್ಟ ಅಧಿಕಾರಿಯಾಗಿದ್ದು, ತಂದೆ-ತಾಯಿ, ಸಂಬಂಧಿಕರು ಮತ್ತು ಆಪ್ತರ ಹೆಸರಿನಲ್ಲಿ ಅಪಾರ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅಲ್ಲದೆ, ಬೇನಾಮಿ ಹೆಸರಿನಲ್ಲಿ . 44 ಎಕರೆ 24 ಗುಂಟೆ ಎಕರೆ ಜಮೀನು ಖರೀದಿಸಿದ್ದಾರೆ. ಅದರಲ್ಲಿ 37 ಎಕರೆ ಚನ್ನಣ್ಣನವರ್ ತಂದೆ-ತಾಯಿ ಒಡೆತನದಲ್ಲಿದೆ. ಈ ಜಮೀನು ಖರೀದಿಸಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ. ಇನ್ನೂ ರೇಣುಕಾ ಎಂಟರ್‌ಪ್ರೈಸೆಸ್ ಎಂಬ ಸಂಸ್ಥೆಯ ಹೆಸರಿನಲ್ಲಿ 30 ವರ್ಷದ ಅವಧಿಗೆ ಕ್ವಾರಿ ಗುತ್ತಿಗೆ ಪಡೆದಿದ್ದಾರೆ. ಈ ಕಂಪನಿಯಲ್ಲಿ ಚನ್ನಣ್ಣನವರ್ ತಾಯಿ ಪಾಲುದಾರರಿದ್ದಾರೆ. ಈ ಕಂಪನಿಗೆ ಕೋಟ್ಯಂತರ ಹಣ ಬಂಡವಾಳ ಹೂಡಿಕೆ ಮಾಡಿದ್ದು, ಗುತ್ತಿಗೆ ಪಡೆಯಲು ತಮ್ಮ ಪ್ರಭಾವ, ಅಧಿಕಾರ ಮತ್ತು ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಚನ್ನಣ್ಣನವರ್ ಭ್ರಷ್ಟಾಚಾರದ ಬಗ್ಗೆ ಮಂಜುನಾಥ್ ಎಂಬುವರು ದೂರು ಸಹ ದಾಖಲಿಸಿದ್ದಾರೆ. ಸರ್ಕಾರ ಸಹ ಈವರೆಗೂ ಈ ಭ್ರಷ್ಟ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಜುರುಗಿಸಿಲ್ಲ. ಆದ್ದರಿಂದ ಆದಾಯ ಮೀರಿ ಮತ್ತು ಅಕ್ರಮ ಆಸ್ತಿ ಗಳಿಕೆ ಸಂಬಂಧ ಚನ್ನಣ್ಣನವರ್ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಲು ಸಿಬಿಐ ಅಥವಾ ಇಡಿಗೆ ಆದೇಶಿಸಬೇಕು. ಅವರನ್ನು ಸೇವೆಯಿಂದ ಅಮಾನತುಪಡಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಆರೋಪ ಸಾಬೀತಾಗಿಲ್ಲ:
ಚನ್ನಣ್ಣನವರ್ ವಿರುದ್ಧದ ಲಂಚ ಆರೋಪ ಸಂಬಂಧ ಐಜಿ ಮಟ್ಟದಲ್ಲಿ ತನಿಖೆ ನಡೆಸಲಾಗಿದ್ದು, ಆರೋಪ ಸಾಬೀತುಪಡಿಸುವ ಯಾವುದೇ ಅಂಶ ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಹಾಗಾಗಿ ಕ್ರಮ ಕೈಗೊಳ್ಳಲಾಗದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಪರಿಷತ್ತಿನಲ್ಲಿ ಕಳೆದ ವಾರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.