ಸಮಗ್ರ ನ್ಯೂಸ್: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಿದ ಯೋಗಿ ಆದಿತ್ಯನಾಥ ಅವರು ಶಾಸಕಾಂಗ ಪಕ್ಷದ ಸಭೆಯ ನಾಯಕರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅವರು ಮಾ.25ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕೇಂದ್ರದ ವೀಕ್ಷಕರಾಗಿ ನೇಮಕರಾಗಿದ್ದ ಗೃಹಸಚಿವ ಅಮಿತ್ ಶಾ ಅವರು ಯೋಗಿ ಅವರ ಆಯ್ಕೆಯನ್ನು ಪ್ರಕಟಿಸಿದರು. ಸಹವೀಕ್ಷಕರಾಗಿದ್ದ ಹಿರಿಯ ಮುಖಂಡ ರಘುಬರ ದಾಸ್ ಅವರು ಉಪಸ್ಥಿತರಿದ್ದರು.
ಶುಕ್ರವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಯೋಗಿ ಅವರ ಜೊತೆಗೆ ಬಿಜೆಪಿ ಹಾಗೂ ಮಿತ್ರಪಕ್ಷಗಳ ಎಷ್ಟು ಶಾಸಕರು ಸಚಿವ ಸಂಪುಟ ಸೇರಲಿದ್ದಾರೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಈ ಬಗ್ಗೆ ಕೇಂದ್ರೀಯ ನಾಯಕರ ಜೊತೆ ಮಾತುಕತೆ ನಡೆಯುತ್ತಿದೆ.
ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಯೋಗಿ ಅವರು ರಾಜಭವನಕ್ಕೆ ತೆರಳಿದರು. 273 ಶಾಸಕರ ಪಟ್ಟಿಯನ್ನು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರಿಗೆ ಹಸ್ತಾಂತರಿಸಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯೋಗಿ, ಚುನಾವಣೆಯಲ್ಲಿ ಪಕ್ಷದ ಗೆಲುವಿನ ಶ್ರೇಯವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದರು. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ವಾಗ್ದಾನ ಮಾಡಿದರು.
ಆದಿತ್ಯನಾಥ್ ಉತ್ತರಪ್ರದೇಶದಲ್ಲಿ 37 ವರ್ಷಗಳ ಬಳಿಕ, ಎರಡನೇ ಅವಧಿಗೆ ಆಯ್ಕೆಯಾಗುತ್ತಿರುವ ಮೊದಲ ಮುಖ್ಯಮಂತ್ರಿ ಎನಿಸಿದ್ದಾರೆ
ಉತ್ತರ ಪ್ರದೇಶದಲ್ಲಿ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಮೊದಲ ಸಿಎಂ ಯೋಗಿ ಆಗಿದ್ದು, 403 ಕ್ಷೇತ್ರಗಳ ಪೈಕಿ 255 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಬಿಜೆಪಿ ಶೇಕಡ 41.29ರಷ್ಟು ಮತ ಪಡೆದು ಬಹುಮತ ಪಡೆದಿತ್ತು. ಯೋಗಿ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದು, ಪ್ರಧಾನಿ ಭವ್ಯ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಲಿದ್ದಾರೆ. ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಭಾಗಿಯಾಗಲಿದ್ದು, ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲಬ್ರೆಟಿಗಳಾದ ಅಕ್ಷಯ್ ಕುಮಾರ್, ಕಂಗನಾ ರನೌತ್ ಮತ್ತು ಬೋನಿ ಕಪೂರ್, ದಿ ಕಾಶ್ಮೀರಿ ಫೈಲ್ಸ್ ಚಿತ್ರತಂಡ ಯೋಗಿ ಪಟ್ಟಾಭಿಷೇಕ ವೇಳೆ ಭಾಗಿಯಾಗಲಿದ್ದಾರೆ.