ಸುಳ್ಯ : ಪೆರಾಜೆಯ ಕುಂಬಳಚೇರಿ ಎಂಬಲ್ಲಿ ಬೈಕ್ ಹಾಗೂ ಜೀಪು ಮಧ್ಯೆ ಅಪಘಾತ ನಡೆದು ಬೈಕ್ ನಲ್ಲಿದ್ದ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಮೃತ ಯುವಕನ್ನು ಪೆರಾಜೆಯ ಲೋಕನಾಥ ಕುಂದಲ್ಪಾಡಿ ಅವರ ಪುತ್ರ ವಿಶ್ವದೀಪ್ ಎಂದು ಗುರುತಿಸಲಾಗಿದೆ. ಪೆರಾಜೆಯ ಆರ್.ಡಿ. ವೆಂಕಪ್ಪ ರವರ ಪುತ್ರ ದರ್ಶನ್ ಮತ್ತು ಸುಳ್ಯದ ಸೈಂಟ್ ಜೋಸೆಫ್ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಗಳಾಗಿದ್ದು ಇಂದು ಪರೀಕ್ಷೆ ಮುಗಿಸಿ ಇಬ್ಬರು ಬೈಕಿನಲ್ಲಿ ಮನೆಗೆ ತೆರಳಿದ್ದರು.ಈ ವೇಳೆ ಕುಂಬಳಚೇರಿ ಬಳಿಯ ಗಡಿ ಗುಡ್ಡೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಜೀಪ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಜೀಪಿಗೆ ಗುದ್ದಿತೆನ್ನಲಾಗಿದೆ.
ಡಾಮರ್ ಗೆ ತಲೆ ಒಡೆಯಲ್ಪಟ್ಟು ವಿಶ್ವದೀಪ್ ಸ್ಥಳದಲ್ಲೇ ಮೃತಪಟ್ಟರೆ ದರ್ಶನ್ ಗೆ ತೀವ್ರ ಜಖಂ ಆಗಿದೆ. ಅವರಿಬ್ಬರನ್ನು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ದರ್ಶನ್ ನನ್ನು ಮಂಗಳೂರಿಗೆ ಕಳಿಸಲಾಗಿದೆ.