ಸಮಗ್ರ ನ್ಯೂಸ್: ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಹಿಂದೂ ಹೊರತಾದ ವ್ಯಾಪಾರ ನಡೆಸಲು ಅವಕಾಶ ಇಲ್ಲ ಎಂಬುದಾಗಿ ಅಳವಡಿಸಲಾದ ಫ್ಲೆಕ್ಸ್ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಉಲ್ಲಂಘನೆ ಕಂಡು ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರೆ ಸಂಬಂಧ ಅಳವಡಿಸಲಾದ ಫ್ಲೆಕ್ಸ್ ನಲ್ಲಿ ಹಿಂದೂಯೇತರರಿಗೆ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ಬರೆದಿರುವುದು ಸಾಮಾಜಿಕ ತಾಣಗಳನ್ನು ಹರಿದಾಡುತ್ತಿದೆ. ಅಲ್ಲದೆ ಸಂವಿಧಾನ ಮತ್ತು ಕಾನೂನು ಗೌರವಿಸದಿರುವವರಿಗೆ, ಗೋವುಗಳನ್ನು ಅಮಾನುಷವಾಗಿ ಕೊಲ್ಲುವವರಿಗೆ ಕೂಡಾ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬರೆಯಲಾಗಿದೆ. ಈ ಎರಡು ವಿಚಾರಗಳ ಬಗ್ಗೆ ದೇವಳದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಕಾರ್ಪೋರೇಟರ್ ಗಮನಕ್ಕೆ ತರಲಾಗಿದೆ. ಈ ವಿಚಾರವಾಗಿ ಅವರು ಏನು ಕ್ರಮಕ್ಕೆ ಮುಂದಾಗುತ್ತಾರೆ ಎಂಬುದನ್ನು ನೋಡಿ ಬಳಿಕ ಕಾನೂನು ತಜ್ಞರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬುದಾಗಿ ನಿಯಮ ಇದೆ ಎಂದು ಆಡಳಿತ ಮಂಡಳಿಯವರು ಹೇಳಿದ್ದಾರೆ. ಆದರೆ ಈ ಬಗ್ಗೆ ಲಿಖಿತ ದಾಖಲೆಗಳು ಸಿಕ್ಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಪರಿಶೀಲನೆ ಮಾಡಲಿದ್ದಾರೆ. ಒಂದು ವೇಳೆ ಕಾನೂನು ಮೀರಿ ಉಲ್ಲಂಘನೆ ಕಂಡು ಬಂದಲ್ಲಿ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.