ಸಮಗ್ರ ನ್ಯೂಸ್: ಸರ್ಕಾರಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ದುರ್ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸಂಕೇನಹಳ್ಳಿಯಲ್ಲಿ ನಡೆದಿದೆ.
ಅಕ್ಮಲ್(18) ಜಿಲಾನಿ(19) ತೌಹೀದ್(18) ಕೈಫ್ (18) ಎಂಬವರು ಮೃತ ದುರ್ದೈವಿಗಳು. ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.
ಮೃತಪಟ್ಟವರನ್ನು ವಿದ್ಯಾವಿಕಾಸ್ ಶಾಲೆಯ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಐದು ಮಂದಿ ಬೇಲೂರಿನಿಂದ ಹಾಸನಕ್ಕೆ ಪ್ರಯಾಣಿಸುತ್ತಿದ್ದು, ನಿಯಂತ್ರಣ ತಪ್ಪಿ ಇಂದು ಮಧ್ಯಾಹ್ನ ಸಂಕೇನಹಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ತಿಳಿದುಬಂದಿದೆ.
ಘಟನೆ ವಿವರ: ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೇಲೂರಿನಿಂದ ಹಾಸನದತ್ತ ಹೊರಟಿದ್ದ ಆಲ್ಟೋ ಕಾರು ಹಾರೋಹಳ್ಳಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಐವರು ವಿದ್ಯಾರ್ಥಿಗಳ ಪೈಕಿ ನಾಲ್ವರರು ಸ್ಥಳದಲ್ಲೇ ದುರ್ಮರಣಕ್ಕೀಡಾದರು.
ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತ್ತಾದರೂ ಮಾರ್ಗದಲ್ಲೇ ಕೊನೆಯುಸಿರೆಳೆದ. ಅಪಘಾತದ ತೀವ್ರತೆ ಹೇಗಿತ್ತೆಂದರೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿ, ನಾಲ್ವರ ಶವಗಳನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ಒಂದು ತಾಸಿನವರೆಗೂ ಮೃತರ ಗುರುತು ಕೂಡ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಓರ್ವನ ಕಾಲೇಜು ಐಡಿ ಕಾರ್ಡ್ ಮೂಲಕ ಮೃತರ ಗುರುತು ಪತ್ತೆ ಮಾಡಲಾಯಿತು.
ಕಾಲೇಜಿಗೆ ತೆರಳಿದ್ದ ಮಕ್ಕಳು ಅಪಘಾತದಲ್ಲಿ ಸತ್ತ ಸುದ್ದಿ ಕುಟುಂಬಸ್ಥರಿಗೆ ಬರಸಿಡಿಲಿನಂತೆ ಬಂದೆರಗಿದೆ. ಮೃತದೇಹಗಳನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆ ಬಳಿ ಪಾಲಕರು-ಸಂಬಂಧಿಕರು ದೌಡಾಯಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.