ಸಮಗ್ರ ನ್ಯೂಸ್: ಮುಂದೊಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜವಾದೀತು ಎಂದು RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಕುತ್ತಾರಿನಲ್ಲಿ ನಡೆದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಸಮಾರೋಪ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯಿಂದ ಭಾರತದ ರಾಷ್ಟ್ರಧ್ವಜ ಇಬ್ಭಾಗವಾಯಿತು. ಮುಂದೊಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜವಾದೀತು. ಇದು ಯಾಕೆ ಅಂತ ನಾನು ಈ ಬಗ್ಗೆ ಸ್ಪಷ್ಟೀಕರಣ ಕೊಡ್ತೇನೆ. ಈ ಮೂರು ಬಣ್ಣಗಳ ರಾಷ್ಟ್ರಧ್ವಜವನ್ನು ನಿರ್ಮಾಣ ಮಾಡಿದವರು ಯಾರು? ಅದಕ್ಕಿಂತಲೂ ಮೊದಲು ಯಾವ ಧ್ವಜವಿತ್ತು? ಮುಂದೊಂದು ದಿನ ರಾಜ್ಯಸಭೆ, ಪಾರ್ಲಿಮೆಂಟ್ ನಲ್ಲಿ ಮೂರನೆಯವರು ಬಹುಮತ ಪಡೆದರೆ ಧ್ವಜ ಬದಲು ಮಾಡಬಹುದು. ರಾಷ್ಟ್ರಧ್ವಜ ಬದಲು ಮಾಡಬಾರದಂತೇನು ಇಲ್ಲವೆಂದು ಹೇಳಿದ್ದಾರೆ.
ಮುಂದೊಂದು ದಿನ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಬದಲು ಕೇಸರಿ ಧ್ವಜ ಹಾರಿಸುವ ದಿನ ಬರುತ್ತದೆ ಎಂದು ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.