ಸಮಗ್ರ ನ್ಯೂಸ್: ಅತಿವೇಗದಿಂದ ಚಲಿಸುತ್ತಿದ್ದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿರುವ ಬಸ್ ಡಿಪೋ ಸಮೀಪದಲ್ಲಿ ಶನಿವಾರ ಸಂಭವಿಸಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಗದಗ ನಗರದ ದರ್ಶನ್ ರಾಜ್ ಪುರೋಹಿತ್ (22), ಶೌಖತ್ ಅಲಿ ಖಾನ್ (23), ಮೈಪೂಸ್ ಆಲಂ (22) ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೊಹಮ್ಮದ್ ಮುಲ್ಲಾ ಅವರಿಗೆ ರೋಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗದಗ ನಗರದಿಂದ ಸ್ನೇಹಿತರೊಂದಿಗೆ ರೋಣಕ್ಕೆ ಬಂದಿದ್ದ ನಾಲ್ವರು ಯುವಕರು ವಾಪಸ್ ಊರಿಗೆ ಹೋಗುವಾಗ ಈ ಘಟನೆ ನಡೆದಿದೆ.
ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಈ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರು ಹಾಗೂ ರಸ್ತೆ ಬದಿ ಇದ್ದ ಸಾರ್ವಜನಿಕರು ಕಾರ್ನಲ್ಲೇ ಮೃತಪಟ್ಟವರು ಹಾಗೂ ಗಾಯಗೊಂಡಿಡ್ಡ ಯುವಕನನ್ನು ಹೊರಕ್ಕೆಳೆದು ತೆಗೆದಿದ್ದಾರೆ. ದೇಹಗಳನ್ನು ಹೊರತೆಗೆದ ಕೂಡಲೇ ಡೀಸೆಲ್ ಸೋರಿಕೆಯಾಗಿ ಕಾರ್ನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡು, ಭಾಗಶಃ ಕಾರು ಸುಟ್ಟುಹೋಗಿದೆ.