Ad Widget .

“ಬಣ್ಣಗಳಲ್ಲವೇ ಬದುಕನ್ನು ತುಂಬುವುದು” | ಪ್ರಕೃತಿಯ ರಂಗಿಗೆ ಹೋಳಿಯೇ ಬರಬೇಕು|

Ad Widget . Ad Widget .

ಸಮಗ್ರ ವಿಶೇಷ: ರಸ್ತೆಯ ತುಂಬೆಲ್ಲಾ ಮರದಿಂದ ಉದುರಿದ ಹೂಗಳ ರಾಶಿ. ಪಕಳೆ ಕಳಚಿ ಬಿದ್ದ ಒಂದೊಂದು ಹೂವು ಕೂಡಾ ಪ್ರಕೃತಿಯ ರಂಗನ್ನು ಹೆಚ್ಚಿಸಿದೆ. ಮರಗಳು ಎಲೆಗಳ ಉದುರಿಸಿ ಬಣ್ಣದ ಹೂಗಳ ಗೊಂಚಲ ಸುರಿಸುತ್ತಿವೆ. ಇನ್ನೇನು ಕೆಲ ದಿನಗಳಲ್ಲಿ ಬರುವ ನವಯುಗಾದಿಯ ಸ್ವಾಗತಿಸಲು ರೆಡಿಯಾದಂತೆ ಕಾಣುತ್ತಿವೆ. ಅರೆ! ಇದೇನಿದು? ಎನಿಸುತ್ತಿರುವಾಗ ನೆನಪಾದದ್ದು ರಂಗಿನ ಹಬ್ಬ ‘ಹೋಳಿ’.

Ad Widget . Ad Widget .

ಕಾಮದಹನ, ಹೋಳಿ ಹುಣ್ಣಿಮೆ, ಮುಂತಾಗಿ ಕರೆಯುವ ಈ ಹಬ್ಬ ಭಾರತದ ಉದ್ದಗಲಕ್ಕೂ ಆಚರಿಸುವ ಬಣ್ಣದ ಓಕುಳಿಯ ಜಾತ್ರೆ. ಹಿರಿ ಕಿರಿದೆನ್ನದೆ ಪ್ರತೀ ಮನಸ್ಸಿನ ಉಲ್ಲಾಸವನ್ನು ಇನ್ನಷ್ಟು ಎತ್ತರಕ್ಕೇರಿಸಬಲ್ಲ ಈ ಹಬ್ಬದ ಸಂಭ್ರಮ ವರ್ಣಿಸಲು ಪದ ಸಾಲದು.

ಸಗ್ಗದ ಬಾಗಿಲು ಅಲ್ಲಿಹುದಣ್ಣ! ನುಗ್ಗಿದರಲ್ಲೆ ತೆರೆಯುವುದಣ್ಣ! ಹಕ್ಕಿಯ ಟುವ್ವಿಯೊಳವಿತಿದೆಯಣ್ಣ, ಹೂವಿನ ಬಣ್ಣದೊಳಡಗಿದೆಯಣ್ಣ ಎಂದು ಕವಿ ಕುವೆಂಪು ಬಣ್ಣಿಸಿರುವುದು ಇದೇ ಇರಬೇಕು.

ಪ್ರಕೃತಿ ಮರಳಿ ಮರಳಿ ಅರಳುವುದಕ್ಕೆ ಬಣ್ಣಬಣ್ಣದ ಕನಸುಗಳ ಹೋಳಿಯೇ ನಡೆಯಬೇಕು. ಪ್ರಕೃತಿಯಲ್ಲಿ ಸಂಭ್ರಮ ತುಂಬಿದಾಗ ಸಹಜವಾಗಿಯೇ ಅದು ಜನಜೀವನದಲ್ಲೂ ಪ್ರತಿಫಲಿಸಬೇಕು. ಆಗಲೇ ನಿಸರ್ಗದ ನಲಿವು ಜನಪದರ ಒಲವಾಗಿ ಮಾರ್ಪಡುತ್ತದೆ. ಕಹಿನೆನಪುಗಳ ನಿಟ್ಟುಸಿರು ವಸಂತನನ್ನು ಹಿಂಬಾಲಿಸುವ ಮಂದಮಾರುತನ ಅಲೆಯಲೆಗಳಲ್ಲಿ ಸೇರಿ ಮರೆಯಾಗಿಬಿಡುತ್ತದೆ. ಕೊನೆಯಲ್ಲಿ ಉಳಿಯುವುದು ಮಧುರ ಭಾವಗಳು ಮಾತ್ರ. ಕೆಟ್ಟದ್ದನ್ನು ಸುಟ್ಟು ಇಷ್ಟವಾದದ್ದನ್ನು ಮೂಟೆಕಟ್ಟುವ ಒಟ್ಟಂದದ ಹಬ್ಬವಲ್ಲವೇ ಹೋಳಿ?

ಜನಪದೀಯ ಆಚರಣೆಗಳೆಲ್ಲವೂ ನಿಸರ್ಗ ಮೂಲದವುಗಳೇ. ಅಲ್ಲಿ ಮೂಢನಂಬಿಕೆಗಳಿಲ್ಲ, ನಂಬಿಕೆ ಮತ್ತು ನಂಬಿಕೆ ಅಷ್ಟೇ. ಆ ನಂಬಿಕೆಯೇ ಜನಪದರ ಬದುಕಿನ ಸಮೃದ್ಧತೆಯ ಮೂಲದ್ರವ್ಯ. ಬಣ್ಣಗಳ ಹಬ್ಬ ಹೋಳಿಯ ಹಿಂದೆಯೂ ಇಂತಹ ನಂಬಿಕೆಗಳ ಸಾಲುಸಾಲು ಕತೆಗಳಿವೆ. ಆದ್ದರಿಂದಲೇ ಕೆಲವರು ಅದನ್ನು ಹೋಳಿಯೆಂದರು, ಇನ್ನು ಕೆಲವರು ವಸಂತೋತ್ಸವವೆಂದರು, ಹಲವರು ಕಾಮನ ಹುಣ್ಣಿಮೆಯೆಂದರು, ಮತ್ತೆ ಕೆಲವರು ಕಾಮದಹನವೆಂದರು, ಉಳಿದವರು ಹೋಳಿಕಾ ದಹನವೆಂದರು. ನೂರು ಮಂದಿ ಸಾವಿರ ಹೆಸರುಗಳಿಂದ ಕರೆದರು. ಆದರೆ ಉದ್ದೇಶ ಒಂದೇ ಆಗಿತ್ತು. ಆಗಿದೆ ಕೂಡಾ. ಅದೇ ದುಷ್ಟಶಕ್ತಿಯ ಧಮನಗೈದು ನಾಳಿನ ಶುಭ ಮುಂಜಾವನ್ನು ಸ್ವಾಗತಿಸುವುದು ಅಷ್ಟೇ.

ಹೋಳಿಯ ಹಿಂದೆ ಹಲವು ಕಥೆಗಳಿವೆ. ಶಿವತಪಸ್ಸನ್ನು ಹನನಗೈಯಲು ಮನ್ಮಥ ತನ್ನ ಕಾಮಬಾಣವನ್ನು ಮುಕ್ಕಣ್ಣನತ್ತ ಪ್ರಯೋಗಿಸಲು, ಉರಿಗಣ್ಣ ತೆರೆದ ಶಿವ ಮನ್ಮಥನನ್ನು ದಹನ ಮಾಡಿದ. ಮನ್ಮಥನನ್ನು ಕಳೆದುಕೊಂಡ ರತಿ ತನಗಿನ್ನಾರು ಗತಿಯೆಂದು ಶಿವನ ಪಾದಕ್ಕೆ ಬಿದ್ದು ಬೇಡಿಕೊಳ್ಳುತ್ತಾಳೆ. ಮನಸ್ಸು ಕರಗಿದ ಈಶ್ವರನು ರತಿಯನ್ನು ಸಂತೈಸಿ, ಕಾಮನು ರತಿಗಷ್ಟೇ ಕಾಣಿಸಿಕೊಳ್ಳುವಂತೆ ಮಾಡುತ್ತಾನೆ. ಮುಂದೆ ಪರಶಿವನು ಪಾರ್ವತಿಯನ್ನು ವಿವಾಹವಾಗಿ ಅವರಿಂದ ಜನಿಸಿದ ಷಣ್ಮುಖ ತಾರಕನನ್ನು ಸಂಹರಿಸುತ್ತಾನೆ. ಲೋಕಕ್ಕೆ ಒಳಿತಾಗುತ್ತದೆ. ಇದು ಕಾಮದಹನ ಅಥವಾ ಕಾಮನ ಹುಣ್ಣಿಮೆಯ ಕಥೆ.

ದುಷ್ಟಶಕ್ತಿಯ ಎದುರು ಒಳ್ಳೆಯತನದ ಗೆಲುವು ಎಂಬ ಲೋಕಾರೂಢಿ. ಚಳಿಗಾಲವೆಂಬ ಕಷ್ಟದ ಕವಚ ಹರಿದು ವಸಂತವೆಂಬ ಸುಖಸಂತೋಷದ ಆಗಮನವನ್ನೇ ಜನಪದರು ಪೌರಾಣಿಕ ಕಥೆಗಳ ಹಿನ್ನೆಲೆಯಲ್ಲಿ ಬಣ್ಣಗಳ ಹಬ್ಬವನ್ನಾಗಿ ಆಚರಿಸುವುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಪುರಾಣಗಳಲ್ಲಿ, ದಶಕುಮಾರ ಚರಿತೆಯಲ್ಲಿ, ಕಾಳಿದಾಸನ ಕಾವ್ಯಗಳಲ್ಲಿ, ಏಳನೇ ಶತಮಾನದ ರತ್ನಾವಳಿ ನಾಟಕದಲ್ಲಿ ಹೋಳಿ ಆಚರಣೆಯ ಉಲ್ಲೇಖಗಳಿವೆ. ಬ್ರಿಟಿಷರ ಆಡಳಿತ ಕಾಲದಲ್ಲೂ ಹೋಳಿಯನ್ನು ಒಂದು ವಿಶಿಷ್ಟ ಹಬ್ಬವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು.

ಹೋಳಿ ಎಂದರೆ ಅದೊಂದು ಸಂಭ್ರಮ. ಯಾರು ಯಾರಿಗೇ ಬಣ್ಣ ಎರಚಿದರೂ ಆ ದಿನದಲ್ಲೊಂದು ವಿನಾಯಿತಿ. ಇಡೀ ದಿನ ಬಣ್ಣಗಳಲ್ಲಿ ಮಿಂದ ಮಂದಿ ಸಂಜೆ ವೇಳೆ ಹೊಸ ಉಡುಗೆ ತೊಡುಗೆಗಳನ್ನು ಧರಿಸಿ ಮನೆಮನೆಗೆ ಭೇಟಿ ನೀಡಿ ಶುಭಾಶಯ ಕೋರುವುದು, ಸಿಹಿತಿನಿಸುಗಳನ್ನು ಹಂಚಿಕೊಳ್ಳುವುದು ಸಂಪ್ರದಾಯ. ಉತ್ತರ ಭಾರತದ ಜೋಳದ ಹಿಟ್ಟಿನ ಗುಜಿಯಾ ಮತ್ತು ಪಾಪ್ಡಿ ಹೋಳಿ ಹಬ್ಬದ ವಿಶೇಷ ತಿನಿಸುಗಳು. ರಾತ್ರಿಯಂತೂ ಸಾಂಸ್ಕೃತಿಕ ವೈವಿಧ್ಯತೆಯ ರಂಗು, ಮನಸ್ಸಿನಲ್ಲೆಲ್ಲ ಬಣ್ಣಗಳ ಗುಂಗು.

ವರ್ಷಗಳು ಉರುಳಿದಂತೆ ಪ್ರಪಂಚದೆಲ್ಲೆಡೆ ಹೋಳಿಯ ಜನಪ್ರಿಯತೆ ವ್ಯಾಪಿಸುತ್ತಲೇ ಇದೆ. ನಮ್ಮ ನೆಲದ ಬಣ್ಣಗಳು ಬೆಳೆಯುತ್ತಲೇ ಇರಲಿ, ಅದು ಸಂತೋಷದ ವಿಷಯವೇ. ಬಣ್ಣಗಳೆಷ್ಟೇ ಇದ್ದರೂ ಅಂತಿಮವಾಗಿ ಎಲ್ಲವೂ ಒಂದೇ ಬಣ್ಣ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಯಾಕೆಂದರೆ ಬಣ್ಣಗಳಲ್ಲವೇ ಬದುಕನ್ನು ತುಂಬುವುದು.

ನಿರೂಪಣೆ: ಪ್ರಸಾದ್ ಕೋಲ್ಚಾರ್

Leave a Comment

Your email address will not be published. Required fields are marked *