ಉಡುಪಿ: ನಾವು ನಮ್ಮ ಕುರಾನ್ ಫಾಲೋ ಮಾಡುತ್ತೇವೆ. ನಾವು ಸರಕಾರದ ಆದೇಶ ಅನುಸರಿಸಬೇಕಾಗಿಲ್ಲ. ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ಬೇಕು ಎಂದು ಹಿಜಾವ್ ಹೋರಾಟಗಾರ್ತಿ ಆಲಿಯಾ ಅಸಾದಿ ಹೇಳಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಜಾವ್ ಹೋರಾಟಗಾರ್ತಿಯರು, ನಮ್ಮ ಸಂವಿಧಾನ ಹಕ್ಕಿಗಾಗಿ ಮುಂದಿನ ಹೋರಾಟ ಮಾಡುತ್ತೇವೆ. ನಮಗೆ ನ್ಯಾಯ ಸಿಗುವ ಭರವಸೆ ಇತ್ತು. ನಾವು ಹಿಜಬ್ ತೆಗೆದು ತರಗತಿ ಒಳಗೆ ಹೋಗಲ್ಲ. ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಕುರಾನ್ ನಲ್ಲಿ ದೇಹವನ್ನು ಮುಚ್ಚಬೇಕೆಂಬ ಉಲ್ಲೇಖ ಇದೆ. ಹಿಜಾಬ್ ಅವಶ್ಯಕತೆ ಇಲ್ಲದಿದ್ದರೆ ನಾವು ಹಿಜಾಬ್ ತೊಡುತ್ತಿರಲಿಲ್ಲ ಜೊತೆಗೆ ಹೋರಾಟ ಮಾಡುತ್ತಿರಲಿಲ್ಲ ಎಂದರು.
ಹಿಜಾಬ್ ವಿಚಾರವನ್ನು ರಾಜಕೀಯ ಲಾಭಕ್ಕೆ ಕಮ್ಯೂನಲ್ ಮಾಡಲಾಗಿದೆ. ರಾಜಕೀಯ ದುರುದ್ದೇಶದಿಂದ ದೊಡ್ಡ ವಿಷಯವಾಗಿ ಮಾಡಿದರು. ಎಲ್ಲರ ಶಿಕ್ಷಣಕ್ಕೆ ಬಹಳ ಸಮಸ್ಯೆ ಆಗಿದೆ.ನಮಗೆ ಧರ್ಮ ಮತ್ತು ಶಿಕ್ಷಣ ಬಹಳ ಮುಖ್ಯ. ನಮಗೆ ಎರಡೂ ಅವಕಾಶ ಬೇಕು ಎಂದಿದ್ದಾರೆ.
ಸರಕಾರದ ಮಧ್ಯಂತರ ಆದೇಶದ ಮೂಲಕ ಕೋರ್ಟ್ ಮೇಲೆ ಪ್ರೆಶರ್ ಹಾಕಲಾಗಿದೆ. ರಾಜ್ಯ ಸರಕಾರ ಕೋರ್ಟ್ ತೀರ್ಪಿನ ಮೇಲೆ ಹಸ್ತಕ್ಷೇಪ ಮಾಡಿದೆ. ರಾಜ್ಯ ಸರಕಾರದಿಂದ ಕೋರ್ಟ್ ಮೇಲೆ ಒತ್ತಡ ಇದೆ. ಒತ್ತಡ ಇದ್ದದ್ದಕ್ಕೆ ಇಂದು ಹಿಜಾಬ್ ವಿರುದ್ಧ ತೀರ್ಪು ಬಂದಿದೆ. ನಾವು ಕಾಂಪ್ರಮೈಸ್ ಮಾಡಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ನಾವು ಕೋರ್ಟ್‌ಗೆ ಹಿಜಾಬ್ ಗಾಗಿ ಹೋದೆವು. ನಮ್ಮ ನಿರೀಕ್ಷೆ ವಿರುದ್ಧ ತೀರ್ಪು ಬಂದಿದ್ದು, ಸರಕಾರದ ವಸ್ತ್ರಸಂಹಿತೆ ಆದೇಶವನ್ನು ತೀರ್ಪಲ್ಲೇ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.
ಮತ್ತೋರ್ವ ಹೋರಾಟಗಾರ್ತಿ ಅಲ್ಮಾಸ್ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ. ಅಂಬೇಡ್ಕರ್ ಬದುಕಿದ್ದರೆ ಇಂದು ಕಣ್ಣೀರು ಹಾಕುತ್ತಿದ್ದರು. ಸಂವಿಧಾನದ ಈಗಿನ ಪರಿಸ್ಥಿತಿ ನೋಡಿ ಮರುಗುತಿದ್ದರು ಎಂದಿದ್ದಾರೆ.
ಇನ್ನು ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾವು ನಮ್ಮ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದೇವೆ. ನಾವು ಈಗಾಗಲೇ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.ಈಗ ಬಂದ ತೀರ್ಪಿನಿಂದ ನಾವು ಬಹಳ ನೊಂದಿದ್ದೇವೆ ಎಂದು ಹೇಳಿದ್ದಾರೆ.