ಸಮಗ್ರ ನ್ಯೂಸ್: ರಾಜ್ಯದಾದ್ಯಂತ ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ಹಿಜಾಬ್ ವಿವಾದ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಯದ ಎನ್ ಎಂ ಸಿ ಪದವಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ತರಗತಿಗೆ ಪ್ರವೇಶ ನಿರಾಕರಣೆ ಸಂಬಂಧಿಸಿ ಮುಸ್ಲಿಂ ವಿದ್ಯಾರ್ಥಿಗಳ ಮತ್ತು ಪೋಷಕರ ಸಭೆ ಸುಳ್ಯದ ಅನ್ಸಾರಿಯ ಸಭಾಭವನದಲ್ಲಿ ತಾಲ್ಲೂಕು ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಎನ್ ಎಂ ಸಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿ-ವಿದ್ಯಾರ್ಥಿನಿ ಗಳು, ಪೋಷಕರು, ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯರು ಹಿಜಾಬ್ ಪ್ರಕರಣ ನಮ್ಮ ಕಾಲೇಜಿನಲ್ಲಿ ಏಕಾಏಕಿ ಪ್ರಾರಂಭವಾಗಿದ್ದು ಕಾಲೇಜಿಗೆ ಸೇರಿದಾಗಿನಿಂದ ಘಟನೆ ನಡೆಯುವ ದಿನದವರೆಗೆ ಯಾವುದೇ ತೊಂದರೆ ಇಲ್ಲದೆ ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸುತ್ತಿದ್ದೆವು. ಆದರೆ ಪದವಿ ಕಾಲೇಜುಗಳಿಗೆ ಸಮವಸ್ತ್ರದ ನಿಯಮ ಕಡ್ಡಾಯವಲ್ಲದಿದ್ದರೂ ಅನಾವಶ್ಯಕವಾಗಿ ನಮಗೆ ಸಂಸ್ಥೆಯ ವತಿಯಿಂದ ಈ ರೀತಿ ತೊಂದರೆ ನೀಡಿರುವುದು ಸರಿಯಲ್ಲ. ನಾವು ಎಲ್ಲಿಯೂ ಕಾನೂನು ವಿರೋಧಿ ಚಟುವಟಿಕೆಗಳನ್ನು ಮಾಡಿದವರಲ್ಲ. ಆದ್ದರಿಂದ ಒಕ್ಕೂಟದ ವತಿಯಿಂದ ನಮ್ಮ ಈ ಸಮಸ್ಯೆಗೆ ಸ್ಪಂದಿಸಿ ಕಾಲೇಜಿನ ಆಡಳಿತ ಮಂಡಳಿ ಅವರೊಂದಿಗೆ ಚರ್ಚಿಸಿ ಪೂರಕ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಕೇಳಿಕೊಂಡರು.
ಪರೀಕ್ಷಾ ದಿನಗಳು ಹತ್ತಿರವಾಗಿದ್ದು ಪರೀಕ್ಷೆ ಬರೆಯಲು ತಪ್ಪಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕೇಳಿಕೊಂಡರು. ವಿವಾದ ಘಟನೆ ನ್ಯಾಯಾಲಯದಲ್ಲಿ ಇರುವ ಕಾರಣ ತೀರ್ಪು ಹೊರ ಬರುವ ತನಕ ನಾವು ಇದೇ ನಿಲುವನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಿದರು.
ಪೋಷಕರು ಮಾತನಾಡಿ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಆಡಳಿತ ಮಂಡಳಿಯ ಮುಖ್ಯಸ್ಥರು ಮತ್ತು ಪ್ರಾಂಶುಪಾಲರ ಬಳಿ ನಾವು ಪೋಷಕರು ತೆರಳಿ ನಮ್ಮ ಮಕ್ಕಳ ಶೈಕ್ಷಣಿಕ ಜೀವನದ ಅತಿ ಮುಖ್ಯ ಘಟಕ ಇದಾಗಿದ್ದು ಕೋರ್ಟು ತೀರ್ಪು ಬರುವ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ವಿನಂತಿಸಿ ಕೊಂಡಿರುತ್ತೇವೆ. ಆದರೆ ಆಡಳಿತ ಸಂಸ್ಥೆಯವರು ಕೋರ್ಟಿನ ಮಧ್ಯಂತರ ತೀರ್ಪನ್ನು ಮುಂದಿಟ್ಟು ನಮ್ಮ ಬೇಡಿಕೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಆದ್ದರಿಂದ ಒಕ್ಕೂಟದ ವತಿಯಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ನಿರ್ಮಾಣವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಕೇಳಿಕೊಂಡರು.
ಮುಸ್ಲಿಂ ಒಕ್ಕೂಟದ ಸಂಚಾಲಕ ಇಕ್ಬಾಲ್ ಎಲಿಮಲೆ ವಿದ್ಯಾರ್ಥಿಗಳ ಭವಿಷ್ಯದ ಉದ್ದೇಶದಿಂದ ಈಗಾಗಲೇ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ನಮ್ಮ ಮುಖಂಡರುಗಳ ನೇತೃತ್ವದಲ್ಲಿ ಮಾತುಕತೆ ನಡೆಸಿದ್ದೇವೆ. ಆಡಳಿತ ಸಮಿತಿಯ ಮುಖ್ಯಸ್ಥರು ನಿಮ್ಮ ಹೆಣ್ಣುಮಕ್ಕಳಿಗೆ ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರ ಕಲಿಕೆಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂಬ ಭರವಸೆಯನ್ನು ನೀಡಿರುತ್ತಾರೆ. ಆದ್ದರಿಂದ ಹೆಣ್ಣುಮಕ್ಕಳ ವಿವಾದದಲ್ಲಿ ಹುಡುಗರು ತಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಿಕೊಳ್ಳಬೇಡಿ. ಹುಡುಗರು ಕಾಲೇಜಿಗೆ ಹೋಗಬೇಕು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರನ್ನು ತರಗತಿಗೆ ಸೇರಿಸಿದೇ ಇದ್ದರೆ ನಾವು ಕೂಡ ಹೋಗುವುದಿಲ್ಲ ಎಂದು ಹೇಳಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳ ಮುಖಂಡ ವಿನಾಕಾರಣ ನಮ್ಮ ಕಾಲೇಜಿನಲ್ಲಿ ಈ ವಿಷಯವನ್ನು ಎಳೆದು ತರಲಾಗಿದೆ. ಸೌಹಾರ್ದತೆಯಿಂದ ಇಷ್ಟು ವರ್ಷ ನಾವು ಆ ಕಾಲೇಜಿನಲ್ಲಿ ಕಲಿತಿದ್ದೇವೆ. ಇದೀಗ ಏಕಾಏಕಿ ಸಂಸ್ಥೆಯ ಈ ತೀರ್ಮಾನದಿಂದ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಪ್ರಸ್ತುತ ಸಾಲಿನ ಶಿಕ್ಷಣ ಮುಗಿಯುವವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೆಣ್ಣುಮಕ್ಕಳು ಹಿಜಾಬ್ ಧರಿಸಿ ತರಗತಿಗೆ ಹೋಗಲು ಅವಕಾಶ ನೀಡಬೇಕೆಂದು ಹೇಳಿದರು.
ಸಭೆಯಲ್ಲಿ ಒಕ್ಕೂಟದ ಮುಖಂಡರುಗಳಾದ ಹಾಜಿ ಮುಸ್ತಫಾ ಜನತಾ, ಹಾಜಿ ಇಬ್ರಾಹಿಂ ಮಂಡೆಕೋಲು ಕತ್ತರ್, ಕೆ ಎಸ್ ಉಮ್ಮರ್, ಮಜೀದ್ ಕೆ ಬಿ, ಉಸ್ಮಾನ್ ಬೀರಮಂಗಲ, ರಶೀದ್ ಜಟ್ಟಿಪಳ್ಳ, ಇಬ್ರಾಹಿಂ ಶಿಲ್ಪ ಮೊದಲಾದವರು ಉಪಸ್ಥಿತರಿದ್ದರು.