ಸಮಗ್ರ ನ್ಯೂಸ್: ಕೊರೋನಾ ಕಾರಣ ಕಳೆದೆರಡು ವರ್ಷದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್ ಆಗಿದ್ದು, ಇದೀಗ ಮತ್ತೆ ಸಂಚಾರವನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಅನುಮತಿಸಿದೆ. ಕೋವಿಡ್ ವೈರಸ್ ಹಾವು ಏಣಿ ಆಟವಾಡುತ್ತಿದ್ದ ಕಾರಣ ಭಾರತ ವಿಮಾನಯಾನ ಸಚಿವಾಲಯ ನಿರ್ಬಂಧ ವಿಧಿಸುತ್ತಲೇ ಬಂದಿತ್ತು.
ಮಾರ್ಚ್ 27 ರಿಂದ ವಾಣಿಜ್ಯ ಹಾಗೂ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಗೊಳ್ಳಲಿದೆ ಎಂದು ವಿಮಾನಯಾನ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಫೆಬ್ರವರಿ 28 ರಂದು ವಿಮಾನಯಾನ ಸಚಿವಾಲಯ ಕೊರೋನಾ ಕಾರಣ ವಿಧಿಸಿದ್ದ ನಿರ್ಬಂಧವನ್ನು ಮತ್ತೆ ಮುಂದೂಡಿಕೆ ಮಾಡಿತ್ತು. ಇದು ಕೊನೆಯ ಬಾರಿಗೆ ವಿಧಿಸಿದ್ದ ನಿರ್ಬಂಧವಾಗಿದೆ. ಇದೀಗ ಭಾರತ ಸೇರಿದಂತೆ ವಿಶ್ವದಲ್ಲೇ ಕೊರೋನಾ ಅಬ್ಬರ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ಭಾರತ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಿಸುತ್ತಿದೆ.
2021ರಿಂದ ಭಾರತ ಏರ್‌ಬಬಲ್ ಮೂಲಕ ವಿಮಾನಯಾನ ಸೇವೆ ನೀಡುತ್ತಿತ್ತು. ಏರ್ ಬಬಲ್ ವ್ಯವಸ್ಥೆಯಡಿ 31 ದೇಶಗಳಿಗೆ ಮಾತ್ರ ವಿಮಾನ ಸೇವೆ ನೀಡಲಾಗುತ್ತಿತ್ತು. ಕೊರೋನಾ ವೈರಸ್ ಕಾರಣ 2020ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಮೊದಲ ಲಾಕ್‌ಡೌನ್ ಹೇರಿತ್ತು. ಈ ವೇಳೆ ಅಂತಾರಾಷ್ಟ್ರೀಯ ವಿಮಾನ ಸೇವೆಗೂ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ವಿಮಾಯಾನ ಸಚಿವಾಲಯ ನಿರ್ಬಂಧ ಮುಂದೂಡುತ್ತಲೇ ಬಂದಿತ್ತು.